ಬಾಗಲಕೋಟೆ : ವಿಶ್ವದಾದ್ಯಂತವಿರುವ ಮೂವತ್ತಕ್ಕೂ ಹೆಚ್ಚು ದೇಶಗಳ ನೂರಕ್ಕೂ ಹೆಚ್ಚು ಅನಿವಾಸಿ ಕನ್ನಡಪರ ಸಂಘಟನೆಗಳು ಒಗ್ಗಟ್ಟಾಗಿ ಒಂದೇ ದಿನ ಒಂದೇ ಧ್ವನಿಯೊಂದಿಗೆ ಟ್ವಿಟರ್ ಮತ್ತು ಇ- ಮೇಲ್ ಮೂಲಕ ಸರ್ಕಾರಕ್ಕೆ ಬೇಡಿಕೆಯೊಂದನ್ನು ಸಲ್ಲಿಸಿದ್ದಾರೆ.
ಅನಿವಾಸಿ ಕನ್ನಡಿಗರ ಫೋರಂಗೆ ಉಪಾಧ್ಯಕ್ಷರನ್ನು ನೇಮಿಸುವಂತೆ ಜನವರಿ 2 ರಂದು ಸಂಜೆ 4 ಗಂಟೆಗೆ 'ಎನ್ಆರೈ ಅಪೀಲ್ ಡೇ' ಎಂಬ ಹ್ಯಾಷ್ ಟ್ಯಾಗ್ನೊಂದಿಗೆ ಅನಿವಾಸಿ ಕನ್ನಡಿಗರು ಟ್ವೀಟ್ ಮತ್ತು ಇ-ಮೇಲ್ ಮಾಡಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದರು.

ಅನಿವಾಸಿ ಕನ್ನಡಿಗರಿಗಾಗಿಯೇ ಕರ್ನಾಟಕ ಸರಕಾರದ ಅಧೀನದಲ್ಲಿ ಅನಿವಾಸಿ ಕನ್ನಡಿಗರ ಸಮಿತಿ (ಕೆಎನ್ಆರೈ ಪೋರಂ) ಇದ್ದು, ಇದರ ಅಧ್ಯಕ್ಷರು ಸ್ವತಃ ಮುಖ್ಯಮಂತ್ರಿಗಳಾಗಿದ್ದಾರೆ. ಆದರೆ, ಮುಖ್ಯಮಂತ್ರಿಗಳಿಗೆ ಸರ್ಕಾರದ ಇತರ ಪ್ರಮುಖ ಜವಾಬ್ದಾರಿಗಳಿರುವ ಕಾರಣ ಕೆಎನ್ಆರೈ ಸಮಿತಿಯಲ್ಲಿ ಉಪಾಧ್ಯಕ್ಷರು ಅತ್ಯಂತ ಪ್ರಮುಖರಾಗಿರುತ್ತಾರೆ. ಆದರೆ ಕಳೆದ ಮೂರು ವರ್ಷಗಳ ಹಿಂದೆ ತೆರವುಗೊಂಡ ಉಪಾಧ್ಯಕ್ಷ ಸ್ಥಾನಕ್ಕೆ ಹೊಸದಾಗಿ ಇದುವರೆಗೂ ಯಾರನ್ನೂ ನೇಮಕ ಮಾಡಿಲ್ಲ. ಹಲವಾರು ಕನ್ನಡಪರ ಸಂಘಟನೆಗಳು ಈ ಕುರಿತು ಸರ್ಕಾರದ ಗಮನ ಸೆಳೆದಿದ್ದರೂ, ಯಾರೂ ಸ್ಪಂದಿಸುವ ಗೋಜಿಗೆ ಹೋಗಿಲ್ಲ. ಇದೀಗ ಶತಾಯಗತಾಯ ತಮ್ಮ ಬೇಡಿಕೆಯನ್ನು ಕರ್ನಾಟಕ ಸರಕಾರಕ್ಕೆ ತಲುಪಿಸಬೇಕೆಂಬ ಉದ್ದೇಶದಿಂದ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಯಾನ ಮಾಡಲಾಗಿದೆ.
ಓದಿ : ಟ್ವಿಟರ್ನಲ್ಲಿ ಜನವರಿ 2ರಂದು 'ಎನ್ಆರ್ಐ ಅಪೀಲ್ ಡೇ' ಅಭಿಯಾನ
ಅಂತಾರಾಷ್ಟ್ರೀಯ ಕನ್ನಡಿಗಾಸ್ ಫೆಡರೇಷನ್ ಕರೆಕೊಟ್ಟಿರುವ ಈ ಅಭಿಯಾನಕ್ಕೆ, ಅಮೆರಿಕ, ಯುಎಇ, ಬ್ರಿಟನ್, ಆಸ್ಟ್ರೇಲಿಯಾ, ಕತಾರ್, ಕುವೈತ್, ಇಟಲಿ, ಜರ್ಮನಿ, ಕೀನ್ಯಾ, ದಕ್ಷಿಣ ಆಫ್ರಿಕಾ, ಉಗಾಂಡಾ, ಇಥಿಯೋಪಿಯ, ಡೆನ್ಮಾರ್ಕ್, ನೈಜೀರಿಯಾ, ಹಾಲೆಂಡ್, ಓಮನ್, ಬಹರೈನ್, ಇಂಡೋನೇಷಿಯಾ, ಸೌದಿ ಅರೇಬಿಯಾ, ಇಸ್ರೇಲ್, ಈಜಿಪ್ಟ್, ಸ್ವಿಜರ್ಲ್ಯಾಂಡ್, ಘಾನ, ನ್ಯೂಜಿಲೆಂಡ್, ವೆಸ್ಟ್ ಇಂಡೀಸ್, ಹಾಂಕಾಂಗ್, ಸಿಂಗಾಪುರ, ಸ್ಕಾಟ್ ಲ್ಯಾಂಡ್, ನಾರ್ವೆ, ನೆದರ್ ಲ್ಯಾಂಡ್, ಸೌತ್ ಕೊರಿಯಾ ಇನ್ನಿತರ ದೇಶಗಳ ನೂರಕ್ಕೂ ಹೆಚ್ಚು ಕನ್ನಡ ಪರ ಸಂಘಟನೆಗಳು ಬೆಂಬಲ ನೀಡಿವೆ.
'ಅನಿವಾಸಿಗಳಿಗಾಗಿ ಒಂದು ದಿನ' ಎಂದು ದೇಶ ವಿದೇಶಗಳಲ್ಲಿ ಇರುವ ಎಲ್ಲಾ ಕನ್ನಡಿಗರು ಅಭಿಯಾನದಲ್ಲಿ ಭಾಗವಹಿಸಿ, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು. ಸಾಗರೋತ್ತರ ಕನ್ನಡಿಗರು ವೇದಿಕೆಯ ಅಧ್ಯಕ್ಷ ಚಂದ್ರಶೇಖರ ಲಿಂಗದಳ್ಳಿ ನೇತೃತ್ವದಲ್ಲಿ ನಡೆದ ಈ ಅಭಿಯಾನಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಸರ್ಕಾರ ಅನಿವಾಸಿ ಕನ್ನಡಿಗರ ಈ ಕೂಗನ್ನು ಆಲಿಸಬೇಕು. ರಾಜ್ಯ ಸರ್ಕಾರ ಅನಿವಾಸಿ ಭಾರತೀಯ ಸಮಿತಿಗೆ ಉಪಾಧ್ಯಕ್ಷರನ್ನು ತಕ್ಷಣವೇ ನೇಮಿಸಿ, ಸರ್ಕಾರ ಮತ್ತು ಅನಿವಾಸಿ ಕನ್ನಡಿಗರ ನಡುವಿನ ಸಂಬಂಧ-ಸಂವಹನವನ್ನು ಗಟ್ಟಿಗೊಳಿಸಬೇಕು ಎಂದು ಚಂದ್ರಶೇಖರ ಲಿಂಗದಳ್ಳಿ ಆಗ್ರಹಿಸಿದ್ದಾರೆ.