ಬಾಗಲಕೋಟೆ: ಇಂದು ಜಿಲ್ಲೆಯ ಜನರು ಬೆಚ್ಚಿಬಿದ್ದಿದ್ದಾರೆ. ಪ್ರತ್ಯೇಕ ಘಟನೆಗಳಲ್ಲಿ ಮೂವರು ಕೊಲೆಗೀಡಾಗಿದ್ದಾರೆ.
ವಿವಾಹೇತರ ಸಂಬಂಧ ಹೊಂದಿದ ಶಂಕೆ ಹಿನ್ನೆಲೆ ಪತ್ನಿಯನ್ನು ಪ್ರಶ್ನಿಸಿದ ಪತಿಯನ್ನು ಆಕೆಯ ಪ್ರಿಯಕರ ಕೊಲೆ ಮಾಡಿದ ಘಟನೆ ಬೇವೂರು ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಸಂಗಾಪುರ ಗ್ರಾಮದಲ್ಲಿ ಬುಧವಾರ (ಡಿ.18) ರಾತ್ರಿ ಈ ಪ್ರಕರಣ ನಡೆದಿದೆ.
ಮಂಜಪ್ಪ ವಡ್ಡರ್(35) ಕೊಲೆಯಾದ ವ್ಯಕ್ತಿಯಾಗಿದ್ದು, ಪ್ರಿಯಕರ ಮಲ್ಲಪ್ಪ ಹೊದ್ಲೂರ ಕೊಲೆಗೈದ ಆರೋಪಿಯಾಗಿದ್ದಾನೆ. ಮಲ್ಲಪ್ಪ ಹೊದ್ಲೂರ, ಪತ್ನಿ ಯಲ್ಲವ್ವ ವಡ್ಡರ ಜೊತೆ ವಿವಾಹೇತರ ಸಂಬಂಧ ಹೊಂದಿದ್ದ ಎನ್ನಲಾಗ್ತಿದೆ.
ಮಂಜಪ್ಪ ವಡ್ಡರ್ಗೆ ಮದ್ಯೆ ಕುಡಿಸಿ, ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಪ್ರಿಯಕರ ಮಲ್ಲಪ್ಪ ಹಾಗೂ ಯಲ್ಲವ್ವನನ್ನು ಬಾಗಲಕೋಟೆ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ, ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸುತ್ತಿದ್ದಾರೆ.
ವೃದ್ಧ ನಾಗಪ್ಪ ಅಂಬಿಗೇರ (60) ಎಂಬುವರನ್ನು ಕೊಲೆ ಮಾಡಿರುವ ಘಟನೆ ಬಾಗಲಕೋಟೆ ನಗರದಲ್ಲಿ ನಡೆದಿದೆ. ನಗರದ ಹಳೆ ಬಸ್ ನಿಲ್ದಾಣದ ಹಿಂಬದಿಯ ಬುರ್ಲಿ ಕಾಂಪ್ಲೆಕ್ಸ್ ಬಳಿ ಈ ಘಟನೆ ನಡೆದಿದೆ. ಕುಡಿದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಕೊಲೆ ಆಗಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಎಸ್ಪಿ ಲೋಕೇಶ್ ಜಗಲಾಸರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮತ್ತೊಂದೆಡೆ ಅನೈತಿಕ ಸಂಬಂಧ ಹಿನ್ನೆಲೆ ಕೊಡಲಿಯಿಂದ ಕೊಚ್ಚಿ ಯುವಕನನ್ನು ಕೊಲೆ ಮಾಡಿರುವ ಘಟನೆ ಬಾಗಲಕೋಟೆ ತಾಲೂಕಿನ ಸೀಮಿಕೇರಿ ಗ್ರಾಮದಲ್ಲಿ ನಡೆದಿದೆ. ಚಂದ್ರು ಹೊರಕೇರಿ (24) ಕೊಲೆಗೀಡಾದ ಯುವಕನಾಗಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ.
ಕಲಾದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಕಾವೇರಿ ಎಂಬುವರ ಜೊತೆ ಅನೈತಿಕ ಸಂಬಂಧ ಹೊಂದಿದ ಯುವಕನ ಕೊಲೆ ಮಾಡಲಾಗಿದೆ.
ಕಾವೇರಿ ಪತಿ ಹನುಮಂತ ಹಾಗೂ ಮಾವ ಮಲ್ಲಪ್ಪ ಎಂಬುವರು ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.