ಬಾಗಲಕೋಟೆ : ಇಂದಿನ ಸಮಾಜದಲ್ಲಿ ನಾವೆಲ್ಲರೂ ಬದುಕಬೇಕಾದ್ರೆ ಹಣ, ಅಂತಸ್ತು, ಆಸ್ತಿ ಇದ್ದರೆ ಸಾಲದು ಮುಖ್ಯ ಉನ್ನತ ಮಟ್ಟದ ಶಿಕ್ಷಣ ಪಡೆಯುವುದು ಅತೀ ಅವಶ್ಯಕ ಎಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಗುಲಾಮ ನದಾಫ್ ಅವರು ಹೇಳಿದರು.
ಕರ್ನಾಟಕ ರಾಜ್ಯ ನದಾಫ/ಪಿಂಜಾರ ಸಂಘ, ಬಾಗಲಕೋಟೆ ಜಿಲ್ಲಾ ಘಟಕ ಹಾಗೂ ತಾಲೂಕು ಘಟಕಗಳ ವತಿಯಿಂದ ನಗರದ ಅಕ್ಷಯ ಇಂಟರ್ ನ್ಯಾಷನಲ್ ಹೋಟೆಲ್‍ನಲ್ಲಿ ಹಮ್ಮಿಕೊಂಡಿದ್ದ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತ್ಯುತ್ತಮ ಸಾಧನೆ ಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ಶಿಕ್ಷಣವನ್ನು ಎಷ್ಟು ಪ್ರೀತಿಯಿಂದ ಕಲಿಯುತ್ತೀರಿ ಅದು ನಿಮ್ಮನ್ನು ಅಷ್ಟೇ ಉನ್ನತ ಮಟ್ಟಕ್ಕೆ ಕರೆದೊಯ್ಯಲಿದೆ. ಎಲ್ಲಾ ರಂಗಗಳಲ್ಲಿ ಮಕ್ಕಳು ಅತ್ಯುತ್ತಮ ಸಾಧನೆ ಮಾಡಬೇಕು. ಸರ್ಕಾರದಿಂದ ಎಲ್ಲಾ ಹಂತಗಳಲ್ಲಿ ಶಿಕ್ಷಣಕ್ಕಾಗಿ ನೆರವು ನೀಡಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಂಡು ಮುನ್ನಡೆಯಬೇಕು ಎಂದರು.
ಬಳಿಕ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಸಾಯಿರಾಬಾನು ನದಾಫ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಒಂದು ಶಕ್ತಿ, ಗುರಿ, ಕನಸು ಇರುತ್ತದೆ. ಅವುಗಳನ್ನು ಈಡೇರಿಸಲು ಉತ್ತಮ ಗುಣಮಟ್ಟದ ಶಿಕ್ಷಣ ಪಡೆದು ಸಮಾಜದಲ್ಲಿ ಹೆಸರು ಗಳಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ನಂತರ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತ್ಯುತ್ತಮ ಸಾಧನೆಗೈದ 35 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.