ಬಾಗಲಕೋಟೆ: ಸಾವಿನ ಮನೆಯಲ್ಲಿಯೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜಕಾರಣ ಮಾಡುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಆರೋಪಿಸಿದ್ದಾರೆ.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಇಡೀ ಮಾನವ ಕುಲಕ್ಕೆ ಸಂಕಷ್ಟ ಬಂದಿದೆ. ಇಂತಹ ಪರಿಸ್ಥಿತಿಯನ್ನು ಎಲ್ಲರೂ ಎದುರಿಸಬೇಕಾಗಿದೆ. ಈ ಸಂದರ್ಭದಲ್ಲಿ ಯಾವ ರೀತಿ ಸಲಹೆ ಸೂಚನೆ ಸರ್ಕಾರಕ್ಕೆ ಕೊಡಬೇಕು ಎಂಬುದರ ಬಗ್ಗೆ ಸಿದ್ದರಾಮಯ್ಯ ಚಿಂತನೆ ಮಾಡಬೇಕು, ಅದು ಬಿಟ್ಟು ರಾಜಕಾರಣ ಮಾಡುವುದು ಬೇಡ. ರಾಜ್ಯದಲ್ಲಿ ಉಂಟಾಗುತ್ತಿರುವ ಸಾವು ನೋವುಗಳ ಸಂಖ್ಯೆ ತಪ್ಪಿಸುವಲ್ಲಿ ಸಹಕಾರ ನೀಡಲಿ, ಕೆಲಸ ಮಾಡಲಿ ಎಂದು ಕಾರಜೋಳ ಸಲಹೆ ನೀಡಿದರು.
ಲಾಕ್ಡೌನ್ ಬಗ್ಗೆ ಸಿಎಂ ನಿರ್ಧಾರ ತೆಗೆದುಕೊಳ್ಳುತ್ತಾರೆ
ಕೊರೊನಾ ಹೆಚ್ಚಾಗಿರುವ ಜಿಲ್ಲೆಗಳಲ್ಲಿ ಲಾಕ್ಡೌನ್ ಜಾರಿ ಮಾಡಬೇಕು ಎಂಬುದು ಐಸಿಎಮ್ಆರ್ ಸಲಹೆ. ಈ ಕುರಿತು ಮುಖ್ಯಮಂತ್ರಿಗಳು ನಿರ್ಣಯ ತೆಗೆದುಕೊಳ್ಳುತ್ತಾರೆ. ಲಾಕ್ಡೌನ್ ಬಗ್ಗೆ ಇನ್ನೂ ನಿರ್ಧಾರ ಆಗಿಲ್ಲ, ಅದಕ್ಕಿಂತ ಮುಂಚೆಯೇ ನಾನು ಹೇಳುವುದಕ್ಕೆ ಆಗಲ್ಲ ಎಂದರು.
ಲಸಿಕೆ ಕೊರತೆ ಬಗ್ಗೆ ಗೊತ್ತಿಲ್ಲ
ವ್ಯಾಕ್ಸಿನ್ ಕೊರತೆ ಬಗ್ಗೆ ಸಚಿವ ಸುಧಾಕರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿ, ಅವರ ಹೇಳಿಕೆಯನ್ನು ನಾನು ನೋಡಿಲ್ಲ. ಅದು ತಪ್ಪು ನಿರ್ಧಾರವೂ ಅಲ್ಲ. ಈಗ 45 ವಯಸ್ಸಿನ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ. 2ನೇ ಅಲೆಯಲ್ಲಿ ಯುವಕರು ಹೆಚ್ಚು ಬಲಿಯಾಗಿದ್ದಾರೆ. ಈ ನಿಟ್ಟಿನಲ್ಲಿ ಅವರಿಗೆ ಹೆಚ್ಚಿನ ಆದ್ಯತೆ ಕೂಡಬೇಕಾಗಿದೆ. ಸಾರ್ವಜನಿಕರು ಎಚ್ಚರ ವಹಿಸಿ ಸರ್ಕಾರದ ನಿಯಮಗಳನ್ನು ಪಾಲಿಸುವಂತೆ ಮನವಿ ಮಾಡಿದರು.