ಬಾಗಲಕೋಟೆ : ಗಣೇಶ ಹಬ್ಬದ ಸಂಭ್ರಮಾಚರಣೆಗೆ ಸರ್ಕಾರ ನಿಷೇಧ ಹೇರಿದೆ. ಇದರಿಂದ ಗಣೇಶಮೂರ್ತಿ ತಯಾರಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ 6 ತಿಂಗಳಿಂದ ಕಷ್ಟ ಪಟ್ಟು ಮೂರ್ತಿ ತಯಾರಿಸಿ ಸಾಕಷ್ಟು ಲಾಭದ ಆಸೆಯನ್ನಿಟ್ಟುಕೊಂಡಿದ್ದ ಕಲಾವಿದರ ಕುಟುಂಬ ಅತಂತ್ರ ಸ್ಥಿತಿಗೆ ತಲುಪಿದೆ.
ನಗರದ ಕಿಲ್ಲಾಗಲ್ಲಿಯಲ್ಲಿ ಕಳೆದ 50 ವರ್ಷದಿಂದ ಕರಿಗಾರ ಎಂಬುವ ಕುಟುಂಬದವರು ಗಣೇಶನ ಮಣ್ಣಿನ ಮೂರ್ತಿಗಳನ್ನ ತಯಾರು ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಆದ್ರೆ, ಕಳೆದ ಎರಡು ವರ್ಷದಿಂದ ಕೋವಿಡ್ ಪರಿಣಾಮ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಸದ್ಯ ಮತ್ತೆ ಅದೇ ಸ್ಥಿತಿ ಎದುರಾಗಿದೆ. ಪರಿಹಾರ ನೀಡಿ, ಇಲ್ಲವೇ ಸಾರ್ವಜನಿಕ ಗಣೇಶಮೂರ್ತಿ ಸ್ಥಾಪನೆಗೆ ಅವಕಾಶ ನೀಡಿ ಎಂದು ಒತ್ತಾಯಿಸಿದ್ದಾರೆ.
ಕೋವಿಡ್ ಮೂರನೇ ಅಲೆಯ ಭೀತಿಯ ಹಿನ್ನೆಲೆ ಗಣೇಶ ಹಬ್ಬ ಆಚರಣೆಗೆ ಸರ್ಕಾರ ನಿರ್ಬಂಧ ಹೇರಿದೆ. ಇದರಿಂದ ಪ್ಲಾಸ್ಟರ್ ಆಪ್ ಪ್ಯಾರಿಸ್ ನಂತಹ ವಿಗ್ರಹಗಳ ಮುಂದೆ ಮಣ್ಣಿನ ಮೂರ್ತಿಗಳನ್ನ ತಯಾರಿಸಿ ತಮ್ಮದೇಯಾದ ಕಲಾವಂತಿಕೆಯ ಹಿರಿಮೆಯನ್ನ ಇಂದಿಗೂ ಉಳಿಸಿಕೊಂಡು ಬಂದಿರೋ ಕುಟುಂಬಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಇದನ್ನೇ ನಂಬಿಕೊಂಡು ಜೀವನ ನಡೆಸುತ್ತಿರೋ ಕುಟುಂಬಗಳು ಕಣ್ಣೀರಿಡುವ ಸ್ಥಿತಿ ಎದುರಾಗಿದೆ.
ರಾಜಕೀಯ ಮುಖಂಡರು, ಜನಪ್ರತಿನಿಧಿಗಳು ಸಮಾವೇಶ, ಇತರ ಸಭೆ- ಸಮಾರಂಭ ನಡೆಸಿದರೆ ಕೊರೊನಾ ಬರಲ್ಲ. ಸಾರ್ವಜನಿಕ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದರೆ ಕೋವಿಡ್ ಬರುತ್ತೆ ಅಂತಿದೆ ಸರ್ಕಾರ. ಹಾಗಾಗಿ, ಸರ್ಕಾರ ನಮ್ಮಂತಹ ಬಡ ಕುಟುಂಬದವರಿಗೆ ಪರಿಹಾರ ನೀಡಲಿ ಎಂದು ಗಣೇಶನ ಮೂರ್ತಿ ತಯಾರಕ ಶಿವಪ್ಪ ಕರಿಗಾರ ಒತ್ತಾಯಿಸಿದ್ದಾರೆ.