ಬಾಗಲಕೋಟೆ: ಜಿಲ್ಲೆಯ ಗುಳೇದಗುಡ್ಡ ಪಟ್ಟಣದಲ್ಲಿ ಪ್ರತಿ ವರ್ಷ ಯುಗಾದಿ ಹಬ್ಬದದಂದು ಭವಿಷ್ಯವಾಣಿ ಹೇಳಲಾಗುತ್ತದೆ. ನೂರಾರು ವರ್ಷಗಳ ಇತಿಹಾಸವಿರುವ ಈ ಭವಿಷ್ಯವಾಣಿ ಮೇಲೆ ನೇಕಾರರು ಹಾಗೂ ಇತರ ಗ್ರಾಮಸ್ಥರು ನಂಬಿಕೆ ಇಟ್ಟಿದ್ದಾರೆ.
ಇಲ್ಲಿನ ಭವಿಷ್ಯವಾಣಿ ಹೇಳುವ ಪದ್ಧತಿಯನ್ನ ಇಲಾಳ ಮ್ಯಾಳದವರು ನಡೆಸಿಕೊಂಡು ಬರುತ್ತಿದ್ದು, ಮಳೆ, ಬೆಳೆ, ವ್ಯಾಪಾರ, ವಹಿವಾಟು ಹಾಗೂ ರಾಜಕೀಯ ಕುರಿತು ಭವಿಷ್ಯವನ್ನು ಹೇಳುತ್ತಾರೆ. ಈ ಬಾರಿ ನರೇಂದ್ರ ಮೋದಿ ಹಾಗೂ ರಾಹುಲ್ ಗಾಂಧಿ ಇಬ್ಬರಿಗೂ ಪ್ರಧಾನಿಯಾಗುವ ಯೋಗ ಇಲ್ಲ. ಮೋದಿ ಅವರಿಗೆ ಪ್ರಧಾನಿ ಆಗೋ ಯೋಗ ಶೇ. 67ರಷ್ಟು ಇದ್ದರೆ, ರಾಹುಲ್ ಗಾಂಧಿ ಪ್ರಧಾನಿಯಾಗುವ ಯೋಗ ಶೇ. 46ರಷ್ಟು ಇದೆ. ಮೋದಿ ಅವರಿಗೆ ಟಂಕಟವನ್ನು ದೂರು ಮಾಡಲು ಸುಬ್ರಹ್ಮಣ್ಯನ ದರ್ಶನ ಮಾಡಬೇಕು. ರಾಹುಲ್ ಗಾಂಧಿ ತಮ್ಮ ಕಂಟಕವನ್ನು ದೂರು ಮಾಡಲು ಮಹಾಕಾಳಿಯ ದರ್ಶನ ಮಾಡಬೇಕು ಎಂದು ಭವಿಷ್ಯ ನುಡಿದರು.
ಇನ್ನು ಒಂದರಿಂದ ನಾಲ್ಕು ಹಂತದಲ್ಲಿ ಮತದಾನ ಸುಗಮವಾಗಿ ಸಾಗುತ್ತದೆ. ಐದು ಮತ್ತು ಏಳನೇಯ ಹಂತದ ಮತದಾನದಲ್ಲಿ ಕೆಟ್ಟ ಘಳಿಗೆ ಇರುತ್ತವಂತೆ. ಎಂಪಿಗಳು ತಮ್ಮ ವೈಯಕ್ತಿಕ ನಿರ್ಧಾರ ತೆಗೆದುಕೊಳ್ಳುತ್ತಾರೆ. ಯಾರು ಯಾರ ಮಾತು ಕೇಳುವ ಸ್ಥಿತಿಯಲ್ಲಿ ಇರುವುದಿಲ್ಲ ಎಂದು ರಾಜಕೀಯ ಭವಿಷ್ಯ ಹೇಳಲಾಗಿದೆ.
ಇನ್ನು ಈ ಬಾರಿ ಮಳೆ, ಬೆಳೆ ಚೆನ್ನಾಗಿ ಆಗಲಿದೆ. ವ್ಯಾಪಾರ ವಹಿವಾಟು ಕೂಡ ಚೆನ್ನಾಗಿ ಆಗಲಿದೆ. ಆದರೆ ಬೆಲೆ ಏರಿಕೆಯಿಂದ ಸಾಮಾನ್ಯ ಜನರು ತತ್ತರಗೊಳ್ಳಲಿದ್ದಾರೆ ಎಂದು ಇಲಾಳ ಮ್ಯಾಳದ ಮಲ್ಲಿಕಾರ್ಜುನ ಗೋಪಿ ಎಂಬುವವರು ಭವಿಷ್ಯ ನುಡಿದರು.
ಈ ಭವಿಷ್ಯವಾಣಿಯನ್ನು ಮುಂಜಾನೆ ಸಮಯದಲ್ಲಿ ಹೇಳಲಾಗುತ್ತದೆ. ಆದರೆ ಕಳೆದ ಅಮವಾಸ್ಯೆ ದಿನದಂದು ರಾತ್ರಿಯಲ್ಲಿ ಇಲಾಳ ಮನೆತನದವರು ಈ ಸ್ಥಳದಲ್ಲಿ ಮಣ್ಣಿನ ಎತ್ತಿನ ಗಾಡಿ, ಎಲ್ಲಾ ಬಗೆಯ ದವಸ ಧಾನ್ಯಗಳು, ಬಟ್ಟೆ ಬರಿ ಸೇರಿದಂತೆ ಎಲೆಗಳನ್ನ ಇಟ್ಟು ಹೋಗಿರುತ್ತಾರೆ. ಮರು ದಿನ ಬೆಳಿಗ್ಗೆ ಬಂದು ಎಲ್ಲವೂ ವೀಕ್ಷಣೆ ಮಾಡಿ, ಭವಿಷ್ಯ ನುಡಿಯುತ್ತಾರೆ.