ಬಾಗಲಕೋಟೆ: ಕಳೆದ ಹದಿನೈದು ದಿನಗಳಿಂದ ಬಾಗಲಕೋಟೆ ನಗರದಲ್ಲಿ ಯಾವುದೇ ವ್ಯಕ್ತಿಗೆ ಕೊರೊನಾ ಸೋಂಕು ಹರಡದ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವ ಮೂಲಕ ವ್ಯಾಪಾರ ವಹಿವಾಟು ನಡೆಸಲು ಅನುಕೂಲ ಮಾಡಿಕೊಡುವುದಾಗಿ ಶಾಸಕ ವೀರಣ್ಣ ಚರಂತಿಮಠ ಭರವಸೆ ನೀಡಿದರು.
ಶಾಸಕ ವೀರಣ್ಣ ಚರಂತಿಮಠ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಡಾ. ಕೆ.ರಾಜೇಂದ್ರ ಸೇರಿದಂತೆ ಇತರ ಅಧಿಕಾರಿಗಳು ಸೋಂಕಿತ ಪ್ರದೇಶಗಳಿಗೆ ಭೇಟಿ ನೀಡಿ ನೀಡಿ ಪರಿಶೀಲನೆ ನಡೆಸಿದರು. ವಲ್ಲಭಭಾಯ್ ವೃತ್ತದಿಂದ ಅಡತ ಬಜಾರ ಹಾಗೂ ಬಸವೇಶ್ವರ ಬ್ಯಾಂಕಿನ ಬಳಿಯ ಪ್ರದೇಶದಲ್ಲಿ ಸೋಂಕು ಹರಡುತ್ತಿದ್ದ ಪರಿಣಾಮ ಅವುಗಳನ್ನು ನಿಷೇಧಿತ ಪ್ರದೇಶ ಎಂದು ಜಿಲ್ಲಾಡಳಿತ ಘೋಷಣೆ ಮಾಡಿತ್ತು. ಇವು ಪ್ರಮುಖ ವ್ಯಾಪಾರ ವಹಿವಾಟು ನಡೆಯುವ ಪ್ರದೇಶವಾಗಿದ್ದರಿಂದ ಎಲ್ಲವೂ ಸ್ಥಗಿತಗೊಂಡಿತ್ತು.
ಸದ್ಯ ಕೊರೊನಾ ಹತೋಟಿಗೆ ಬಂದಿದ್ದು, ಸೀಲ್ ಡೌನ್ ಆಗಿದ್ದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಸದ್ಯ ಯಾವುದೇ ಸಮಸ್ಯೆ ಇಲ್ಲದ ಹಿನ್ನೆಲೆ ನಾಳೆಯಿಂದ ಅಂದರೆ 17ರ ಭಾನುವಾರದಿಂದ ಎಲ್ಲವೂ ಪ್ರಾರಂಭ ಮಾಡುವ ಬಗ್ಗೆ ಸ್ಥಳೀಯರೊಂದಿಗೆ ಶಾಸಕ ವೀರಣ್ಣ ಚರಂತಿಮಠ ಚರ್ಚೆ ಮಾಡಿದರು. ಜೊತೆಗೆ ವ್ಯಾಪಾರ ವಹಿವಾಟು ನಡೆಸಲು ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿದ ಶಾಸಕರು, ಎಲ್ಲರೂ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕಾಗಿ ಸೂಚಿಸಿದರು.