ಬಾಗಲಕೋಟೆ: ಮಹಾಲಿಂಗಪೂರ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ ನಡೆದಿದ್ದ ತಳ್ಳಾಟ, ನೂಕಾಟ ಪ್ರಕರಣದ ತನಿಖೆಯನ್ನು ಹೈಕೋರ್ಟ್ ಸಿಐಡಿ ತಂಡಕ್ಕೆ ವರ್ಗಾಯಿಸಿದೆ. ತಳ್ಳಾಟದಿಂದಲೇ ಪುರಸಭೆ ಸದಸ್ಯೆ ಚಾಂದಿನಿ ನಾಯಕ್ಗೆ ಗರ್ಭಪಾತವಾಗಿದೆ ಎಂದು ಆರೋಪಿಸಲಾಗಿರುವ ಪ್ರಕರಣವನ್ನು ಸಿಐಡಿ ತಂಡ ಕೈಗೆತ್ತಿಕೊಂಡಿದೆ.
ಕಳೆದ ರಾತ್ರಿ ಮಹಾಲಿಂಗಪುರ ಪಟ್ಟಣಕ್ಕೆ ಆಗಮಿಸಿದ್ದ ನಾಲ್ವರು ಅಧಿಕಾರಿಗಳ ಸಿಐಡಿ ತಂಡ, ತಳ್ಳಾಟ ಪ್ರಕರಣ ನಡೆದ ಸ್ಥಳ ಪರಿಶೀಲಿಸಿತು. ನ್ಯಾಯಾಲಯದ ಮೆಟ್ಟಿಲೇರಿದ್ದ ಸಂತ್ರಸ್ತೆ, ಆಕೆಯ ಪತಿ, ಹಾಗೂ ಶಾಸಕ ಸಿದ್ದು ಸವದಿ ಸೇರಿದಂತೆ ಕೆಲ ಸದಸ್ಯರನ್ನು ವಿಚಾರಣೆ ಮಾಡುತ್ತಿದ್ದಾರೆ.
ಘಟನೆ ವಿವರ:
2020ರ ನವಂಬರ್ 9ರಂದು ಬಿಜೆಪಿ ಶಾಸಕ ಸಿದ್ದು ಸವದಿ ನೇತೃತ್ವದಲ್ಲಿ ಬಿಜೆಪಿ ಮುಖಂಡರು ನಡೆಸಿದ್ದ ತಳ್ಳಾಟದಲ್ಲಿ ಪುರಸಭೆ ಸದಸ್ಯೆ ಚಾಂದಿನಿ ನಾಯಕ್ಗೆ ಗರ್ಭಪಾತವಾಗಿತ್ತು. ಈ ಪ್ರಕರಣ ಸಂಬಂಧ ನ್ಯಾಯ ದೊರಕಿಸಿಕೊಡುವಂತೆ ಪುರಸಭೆ ಸದಸ್ಯೆ ಚಾಂದಿನಿ ನಾಯಕ್ ದಂಪತಿ ಹೈಕೋರ್ಟ್ ಮೊರೆ ಹೋಗಿದ್ದರು. ಇದೀಗ ಹೈಕೋರ್ಟ್ ಈ ಪ್ರಕರಣವನ್ನು ಸಿಐಡಿ ತಂಡಕ್ಕೆ ವರ್ಗಾಯಿಸಿದ್ದು, ತನಿಖೆ ಚುರುಕುಗೊಂಡಿದೆ.
ಬಿಜೆಪಿ ಹಾಗೂ ಕಾಂಗ್ರೆಸ್ಗೆ ಪ್ರತಿಷ್ಠೆ ಕಣವಾಗಿದ್ದ ಮಹಾಲಿಂಗಪೂರ ಪುರಸಭೆ ಚುನಾವಣೆ ಸಮಯದಲ್ಲಿ ಉಂಟಾದ ಗಲಾಟೆಯಿಂದ ಬಿಜೆಪಿ ಶಾಸಕ ಸಿದ್ದು ಸವದಿ ತಪ್ಪಿತಸ್ಥರು ಎಂಬ ಆರೋಪ ತನಿಖೆಯಿಂದ ಸಾಬೀತಾದರೆ, ಶಾಸಕ ಸ್ಥಾನಕ್ಕೆ ಕುತ್ತು ಬರಲಿದೆ.
ಇದನ್ನೂ ಓದಿ: ಎರಡು ಗುಂಪುಗಳ ಮಧ್ಯೆ ಮಾರಾಮಾರಿ.. ಕಲ್ಲು ತೂರಾಟ: ಕಾರಿನ ಗಾಜು ಪೀಸ್ ಪೀಸ್!