ಬಾಗಲಕೋಟೆ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ತವರು ಕ್ಷೇತ್ರ ಬಾದಾಮಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಸಚಿವ ಸಿ ಟಿ ರವಿ ಮುಂದಾಗಿದ್ದಾರೆ.
ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಸ್ಮಾರಕಗಳ ಮುಂದೆ ಇರುವ ಮನೆಗಳನ್ನು ಸ್ಥಳಾಂತರ ಮಾಡಿಸಿ, ಚಾಲುಕ್ಯರ ಕಾಲದ ಐತಿಹಾಸಿಕ ಸ್ಮಾರಕಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುವಂತಾಗಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಆದೇಶ ಮಾಡಿದ್ದಾರೆ.
ಬಾಗಲಕೋಟೆ ಜಿಲ್ಲಾಡಳಿತ ಭವನದಲ್ಲಿ ಸಂಸದ ಪಿ ಸಿ ಗದ್ದಿಗೌಡರ, ಶಾಸಕ ವೀರಣ್ಣ ಚರಂತಿಮಠ ಸೇರಿ ಜಿಲ್ಲಾಧಿಕಾರಿ ಹಾಗೂ ಪ್ರವಾಸೋದ್ಯಮ, ಪುರಾತತ್ವ ಇಲಾಖೆಯ ಪ್ರಮುಖ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಸಚಿವ ಸಿ.ಟಿ ರವಿ,ಅಭಿವೃದ್ಧಿಗೆ ಒತ್ತು ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಬಾದಾಮಿ, ಪಟ್ಟದಕಲ್ಲು ಹಾಗೂ ಐಹೊಳೆ ಗ್ರಾಮಗಳನ್ನು ಸ್ಥಳಾಂತರ ಮಾಡಿ, ಸ್ಮಾರಕಗಳನ್ನು ಅಭಿವೃದ್ಧಿ ಪಡಿಸಬೇಕು. ಇದಕ್ಕೆ ಬೇಕಾದ ಅನುದಾನವನ್ನ ಮುಖ್ಯಮಂತ್ರಿ ಜೊತೆಗೆ ಚರ್ಚೆ ಮಾಡಿ ನೀಡಲಾಗುವುದು. ಈ ಬಗ್ಗೆ ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿ, ಸಮಗ್ರ ಸ್ಥಳಾಂತರ ಹಾಗೂ ವೆಚ್ಚ ಆಗುವ ಬಗ್ಗೆ ಅಂದಾಜು ಪಟ್ಟಿ ತಯಾರಿಸಿ ಪತ್ರ ಬರೆದು ಕೊಡಿ. ಅದಕ್ಕೆ ಬೇಕಾದ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಬಾದಾಮಿ ಸ್ಮಾರಕಗಳ ಮುಂದೆ ಇರುವ 93 ಮನೆಗಳನ್ನು ಸ್ಥಳಾಂತರ ಮಾಡಬೇಕಾದರೆ, ಯುಕೆಪಿ ಮಾದರಿಯಲ್ಲಿ ಪರಿಹಾರ ಧನ ಮತ್ತು ಮನೆ ಕಟ್ಟಿಕೊಡುವಂತೆ ಅಲ್ಲಿನ ನಿವಾಸಿಗಳು ಕೇಳುತ್ತಿದ್ದಾರೆ ಎಂದು ಬಾದಾಮಿ ಪುರಸಭೆ ಆಯುಕ್ತ ಸಚಿವರಿಗೆ ತಿಳಿಸಿದರು. ಆಗ ಸಚಿವರು ಮಾತನಾಡಿ, ಮೊದಲು ಮಾನವೀಯತೆಯಿಂದ ಪರಿಹಾರ ಧನ ಹಾಗೂ ನಿವೇಶನ ನೀಡಿ, ನಂತರ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಿ. ಏಕೆಂದರೆ ಬಾದಾಮಿ ನಗರವು 1947 ರಲ್ಲಿ ಹೇಗೆ ಇತ್ತು ಎಂಬುದು ಬ್ರಿಟಿಷರು ಫೋಟೋಗ್ರಫಿ ಮಾಡಿರುವ ಫೋಟೋಗಳಿವೆ. ಅವುಗಳ ಮೂಲಕ ಕ್ರಮ ಜರುಗಿಸಿ ಎಂದರು.