ಬಾಗಲಕೋಟೆ: ವಿಶ್ವ ಪರಂಪರೆಯ ಪಟ್ಟಿಗೆ ಸೇರ್ಪಡೆಯಾಗಿರುವ ಬಾಗಲಕೋಟೆ ಜಿಲ್ಲೆಯ ಐತಿಹಾಸಿಕ ಪಟ್ಟದಕಲ್ಲು ವಿದ್ಯುತ್ ದೀಪಗಳ ಅಲಂಕಾರದಿಂದ ಕಣ್ಮನ ಸೆಳೆಯುತ್ತಿದೆ. ಭಾರತ ಜಿ-20 ಶೃಂಗಸಭೆ ಅಧ್ಯಕ್ಷ ಸ್ಥಾನವನ್ನು ನಿನ್ನೆಯಿಂದ ಅಧಿಕೃತವಾಗಿ ವಹಿಸಿಕೊಂಡಿದೆ. ಹೀಗಾಗಿ ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಗೆ ಸೇರ್ಪಡೆಗೊಂಡಿರುವ ಐತಿಹಾಸಿಕ ಸ್ಮಾರಕಗಳಿಗೆ ಡಿ.1 ರಿಂದ 7ರವರೆಗೆ ಪ್ರತಿ ಸಂಜೆ 6 ರಿಂದ ರಾತ್ರಿ 11 ಗಂಟೆಯವರಗೆ ದೀಪಾಲಂಕಾರ ಮಾಡಲಾಗುತ್ತದೆ.
ಬಾದಾಮಿ ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾಗಿರುವ ಪಟ್ಟದಕಲ್ಲು ವಿಶ್ವ ಐತಿಹಾಸಿಕ ಪರಂಪರೆಯ ಪಟ್ಟಿಗೆ ಸೇರ್ಪಡೆಯಾ ಈ ಹಿನ್ನೆಲೆ 7 ದಿನಗಳ ಕಾಲ ದೀಪಾಲಂಕಾರ ಮಾಡಲಾಗುತ್ತದೆ. ಆದರೆ ಇದನ್ನು ವೀಕ್ಷಣೆ ಮಾಡಲು ಸಾರ್ವಜನಿಕರಿಗೆ ಅವಕಾಶವಿಲ್ಲ.
ಸುಮಾರು 850 ಲೈಟ್ಗಳ ಮೂಲಕ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ. ಎಲ್ಇಡಿ ಮೂಲಕ ಜಿ 20 ಭಾರತ 2023 ಎಂದು ನಾಮಫಲಕ ಹಾಕಿಸಲಾಗಿದೆ. ಸ್ಮಾರಕದ ಗೋಡೆಗೂ ಸಹ ಎಲ್ಇಡಿಯಿಂದ ಚಿತ್ರವನ್ನು ಬಿಂಬಿಸಲಾಗಿದೆ. 7 ದಿನಗಳ ಕಾಲ ದೀಪದ ಅಲಂಕಾರ ಮಾಡುವುದಕ್ಕೆ ಕೇಂದ್ರ ಸರ್ಕಾರ ಸುಮಾರು 15 ಲಕ್ಷಕ್ಕೂ ಅಧಿಕ ವೆಚ್ಚ ಮಾಡಿದೆ ಎಂದು ತಿಳಿದು ಬಂದಿದೆ.
ದೇಶದಲ್ಲಿ ನೂರು ಸ್ಮಾರಕಗಳಿಗೆ ಹೀಗೆ ದೀಪಾಲಂಕಾರ ಮಾಡಲಾಗಿದೆ. ಕೇಂದ್ರ ಸರ್ಕಾರದ ಆದೇಶದಂತೆ ಪುರಾತತ್ವ ಇಲಾಖೆ ವತಿಯಿಂದ ಧಾರವಾಡ ವಲಯದಲ್ಲಿ ಬಾಗಲಕೋಟೆಯ ಪಟ್ಟದಕಲ್ಲು ಹಾಗೂ ವಿಜಯಪುರದ ಗೊಲಗುಂಬಜ್ಗೆ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದೆ ಎಂದು ಪುರಾತತ್ವ ಇಲಾಖೆಯ ಸ್ಥಳೀಯ ಅಧಿಕಾರಿ ಮೌನೇಶ್ವರ ಕುರುವಟ್ಟಿ ತಿಳಿಸಿದ್ದಾರೆ.
ಇದನ್ನೂ ಓದಿ: ಹಂಪಿ ಝಗಮಗ! ಕಣ್ಮನ ಸೆಳೆಯುತ್ತಿದೆ ಆಕರ್ಷಕ ದೀಪಾಲಂಕಾರ: ವಿಡಿಯೋ