ಬಾಗಲಕೋಟೆ: ಜಿಲ್ಲಾಸ್ಪತ್ರೆಯಲ್ಲಿ ಇಂದಿನಿಂದ ಕೋವಿಡ್-19 ಗಂಟಲುದ್ರವ ಮಾದರಿ ಪರೀಕ್ಷಾ ಪ್ರಯೋಗಾಲಯವನ್ನು ಆರಂಭಿಸುತ್ತಿರುವುದಾಗಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಾತನಾಡಿದ ಅವರು, ಕೋವಿಡ್ -19 ಪರೀಕ್ಷೆ ಮಾಡಲು ಐಸಿಎಂಆರ್ನಿಂದ ಅನುಮತಿ ಬಂದಿದ್ದು, ಪ್ರಯೋಗಾಲಯ ಆರಂಭಿಸಲಾಗುತ್ತಿದೆ. ಇದರಲ್ಲಿ ಪ್ರತಿ ದಿನಕ್ಕೆ 100 -110 ಮಾದರಿಗಳನ್ನು ಪರೀಕ್ಷೆ ಮಾಡಬಹುದಾಗಿದೆ. ಸರ್ಕಾರದಿಂದ ಹಾಗೂ ನಗರದ ಮಿಸ್ಕಿನ್ ಲ್ಯಾಬ್‍ನವರು ನೀಡಿರುವ ಮಷಿನ್‍ಗಳಿಂದ ಕೋವಿಡ್-19 ಪರೀಕ್ಷೆ ಮಾಡಲಾಗುತ್ತಿದೆ. ಪ್ರತಿ ಒಂದು ಗಂಟೆಗೆ 5 ಸ್ಯಾಂಪಲ್‍ಗಳನ್ನು ಪರೀಕ್ಷೆ ಮಾಡಬಹುದಾಗಿದೆ ಎಂದರು.
ಇನ್ನು ರೈತರು ಬೆಳೆದ ಮೆಕ್ಕೆಜೋಳದ ದರ ಬಹಳಷ್ಟು ಇಳಿಮುಖವಾದ ಹಿನ್ನೆಲೆ, ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಸಹಾಯಧನವಾಗಿ 5 ಸಾವಿರ ರೂಪಾಯಿಯಂತೆ ನೀಡಲು ಮುಖ್ಯಮಂತ್ರಿ ತೀರ್ಮಾನಿಸಿದ್ದು ಜಿಲ್ಲೆಯ 61 ಸಾವಿರ ರೈತರು ಇದರ ಪ್ರಯೋಜನ ಪಡೆಯಲಿದ್ದಾರೆ. ಜಿಲ್ಲೆಯಲ್ಲಿರುವ ಒಟ್ಟು 4.50 ಲಕ್ಷ ಮಹಿಳಾ ಜನ್ಧನ್ ಖಾತೆದಾರರಿಗೆ ಪ್ರತಿ ತಿಂಗಳು 500 ರೂಪಾಯಿಯಂತೆ ಎರಡು ತಿಂಗಳು ಸೇರಿ ಒಟ್ಟು 45 ಕೋಟಿ ರೂಪಾಯಿ ಜಮಾ ಮಾಡಲಾಗಿದೆ. ಜಮಾ ಮಾಡಲಾದ ಹಣವನ್ನು ಡ್ರಾ ಕೂಡಾ ಮಾಡಿಕೊಂಡಿರುವುದಾಗಿ ತಿಳಿಸಿದರು.