ಬಾಗಲಕೋಟೆ: ಪ್ರಸಕ್ತ ಸಾಲಿಗೆ ವಿವಿಧ ಇಲಾಖೆಗೆ ಬಿಡುಗಡೆಯಾದ ಅನುದಾನವನ್ನು ಸಂಪೂರ್ಣ ಬಳಕೆ ಮಾಡುವ ಮೂಲಕ ಶೇ.100 ರಷ್ಟು ಪ್ರಗತಿ ಸಾಧಿಸುವಂತೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಡಳಿತ ಭವನದ ಆವರಣದಲ್ಲಿರುವ ನೂತನ ಜಿಲ್ಲಾ ಪಂಚಾಯತ್ ಸಭಾಭವನದಲ್ಲಿಂದು ಜರುಗಿದ ಪ್ರಸಕ್ತ ಸಾಲಿನ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿಯೊಂದು ಅಭಿವೃದ್ದಿ ಇಲಾಖೆಗಳು ಪ್ರಸಕ್ತ ಸಾಲಿನ ಭೌತಿಕ ಪ್ರಗತಿ ಶೇ.100 ರಷ್ಟು ಆಗಬೇಕು. ಆರ್ಥಿಕ ಪ್ರಗತಿಯನ್ನು ಇದೇ ಫೆಬ್ರವರಿ 15 ರೊಳಗಾಗಿ ತಯಾರಿಯಲ್ಲಿಟ್ಟುಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲೆಯ ಪ್ರತಿಯೊಂದು ನಗರ ಮತ್ತು ಗ್ರಾಮಗಳಲ್ಲಿ ಸ್ಮಶಾನಗಳ ತೊಂದರೆಯಾಗಬಾರದು ಈ ನಿಟ್ಟಿನಲ್ಲಿ ಆಯಾ ವಿಭಾಗದ ಉಪವಿಭಾಗಾಧಿಕಾರಿಗಳು, ಆಯಾ ತಾಲೂಕಿನ ತಹಶೀಲ್ದಾರರು ಕ್ರಮವಹಿಸಲು ತಿಳಿಸಿದರು. ವಿವಿಧ ಯೋಜನೆಯಡಿ ನಿರ್ಮಾಣಗೊಳ್ಳುತ್ತಿರುವ ಮನೆಗಳ ಜಿಪಿಎಸ್ ಆದರೆ ಮಾತ್ರ ಅವರಿಗೆ ಹಣ ಜಮಾ ಆಗುತ್ತದೆ. ಇದನ್ನು ಅರಿತು ಕಟ್ಟಿದ ಹಂತವಾರು ಮನೆಗಳ ಜಿಪಿಎಸ್‍ಗಾಗಿ ಕ್ರಮ ವಹಿಸಲು ಸೂಚಿಸಿದರು.
ಸರ್ಕಾರ ಸಾಮಾಜಿಕ ಭದ್ರತಾ ಯೋಜನೆಯಡಿ ಸಾಕಷ್ಟು ಹಣ ನೀಡುತ್ತಿದ್ದು, ಮೃತಪಟ್ಟವರಿಗೂ ಸಹ ಮಾಶಾಸನ ಪಡೆಯುತ್ತಿರುವುದು ಗಮನಕ್ಕೆ ಬಂದಿದ್ದು, ಮನೆ ಮನೆಗೆ ತೆರಳಿ ಪರಿಶೀಲನೆ ನಡೆಸಲು ಕ್ರಮಕೈಗೊಳ್ಳಲು ತಿಳಿಸಿದರು. ನಂತರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಉಪ ಮುಖ್ಯಮಂತ್ರಿಗಳು ಗ್ರಾಮೀಣ ಪ್ರದೇಶದಲ್ಲಿರುವ ಗುಂಡಿಗಳನ್ನು ಮುಚ್ಚಲು ತಕ್ಷಣ ಕ್ರಮಕೈಗೊಳ್ಳಲು ಗಡುವು ನೀಡಿದರು. ರಸ್ತೆಗಳ ನಿರ್ವಹಣೆ ಸರಿಯಾಗಿ ನಡೆಯುತ್ತಿಲ್ಲ ಈ ಬಗ್ಗೆ ಹೆಚ್ಚಿನ ಗಮನ ಹರಿಸಲು ಸೂಚಿಸಿದರು.
ನೀರಾವರಿ ಇಲಾಖೆಯಲ್ಲಿ ಅನುದಾನವಿದ್ದರೂ ಸಹ ಪ್ರಗತಿ ಮಾತ್ರ ಕುಂಟಿತಗೊಂಡಿದೆ. ಹೊಸದಾಗಿ ಅಧಿಕಾರ ವಹಿಸಿಕೊಂಡ ಅಧಿಕಾರಿಗಳಿಗೆ ಕಾಲುವೆಗಳ ಮಾಹಿತಿಯನ್ನು ಪಡೆದು ಪರಿಶೀಲಿಸಲು ತಿಳಿಸಿದರು. ಜಿಲ್ಲೆಯಲ್ಲಿ ಪ್ರವಾಹ ಮತ್ತು ನೆರೆ ಹಾವಳಿಯಿಂದ ಮನೆಗಳು ಹಾಳಾಗಿದ್ದು, ಸರ್ಕಾರ ಹಣ ನೀಡಿದರು ಮನೆಗಳನ್ನು ಕಟ್ಟಲು ಇನ್ನು 112 ಜನ ಪ್ರಾರಂಭ ಮಾಡದಿರುವುದನ್ನು ಕಂಡು ಅವರಿಗೆ ನೋಟಿಸ್ ನೀಡಿ ಮನೆ ನಿರ್ಮಾಣ ಪ್ರಾರಂಭಿಸದಿದ್ದಲ್ಲಿ ಸರ್ಕಾರದಿಂದ ನೀಡಿ ಹಣವನ್ನು ಮರಳಿ ಪಡೆದುಕೊಳ್ಳಲು ಸೂಚಿಸಿದರು.
ಪ್ರವಾಹ ಮತ್ತು ನೆರೆಯಿಂದ ಹಾನಿ ಹಾಗೂ ರೈತರಿಗೆ ದೊರೆತ ಪರಿಹಾರದ ವಿವರವನ್ನು ಡಿಸಿಎಂ ಕಾರಜೋಳ ಕೇಳಿದಾಗ ಇದಕ್ಕೆ ಪ್ರತಿಕ್ರಿಯಿಸಿದ ಜಂಟಿ ಕೃಷಿ ನಿರ್ದೇಶಕ ರಿ. ಚೇತನಾ ಪಾಟೀಲ ಜಿಲ್ಲೆಯಲ್ಲಿ 2019-20 ರಲ್ಲಿ 57 ಸಾವಿರ ಹೆಕ್ಟೆರ್ ಪ್ರದೇಶ ಹಾನಿಗೊಳಗಾಗಿದ್ದು, ಒಟ್ಟು 39699 ರೈತರಿಗೆ 93 ಕೋಟಿ ರೂ.ಗಳ ಪರಿಹಾರ ನೀಡಲಾಗಿದೆ. 2020-21 ರಲ್ಲಿ 68489 ಹೆಕ್ಟೇರ್ ಪ್ರದೇಶ ಹಾನಿಗೊಳಗಾಗಿದ್ದು, 83291 ನೊಂದಣಿಯಾದ ರೈತರ ಪೈಕಿ 61757 ರೈತರಿಗೆ 7 ಹಂತಗಳಲ್ಲಿ ಒಟ್ಟು 54.61 ಕೋಟಿ ರೂ.ಗಳ ಪರಿಹಾಧನ ಜಮಾ ಆಗಿರುವುದಾಗಿ ತಿಳಿಸಿದರು.
ತೋಟಗಾರಿಕೆ, ರೇಷ್ಮೆ, ಉದ್ಯೋಗ ಖಾತ್ರಿ, ಪಶು ಸಂಗೋಪನೆ, ಆರೋಗ್ಯ, ಜಿಲ್ಲಾ ಆಯುಷ, ನಗರಾಭಿವೃದ್ದಿ ಕೋಶ, ಆಹಾರ ಇಲಾಖೆ, ಹೆಸ್ಕಾಂ ಸೇರಿದಂತೆ ವಿವಿಧ ಇಲಾಖೆ ಹಾಗೂ ನಿಗಮಗಳ ಪ್ರಗತಿ ಪರಿಶೀಲನೆ ನಡೆಸಿದರು. ಸಭೆಯಲ್ಲಿ ಜಿ. ಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಶಾಸಕ ವೀರಣ್ಣ ಚರಂತಿಮಠ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ. ಕೆ. ರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಜಿ. ಪಂ ಸಿಇಓ ಟಿ. ಭೂಬಾಲನ್, ಉಪಕಾರ್ಯದರ್ಶಿ ಅಮರೇಶ ನಾಯಕ ಸೇರಿದಂತೆ ಜಿ. ಪಂ ಎಲ್ಲ ಸದಸ್ಯರು, ನಾಮನಿರ್ದೇಶಿಕ ಸದಸ್ಯರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.