ಬಾಗಲಕೋಟೆ: ಜಿಲ್ಲೆಯಲ್ಲಿ ರವಿವಾರ ನಡೆದ ಶಿಕ್ಷಕರ ಅರ್ಹತಾ ಪರೀಕ್ಷಾ (ಟಿಇಟಿ) ಕೇಂದ್ರವಾದ ನವನಗರದ ಅಂಜುಮನ್ ಬಾಲಕರ ಪ್ರೌಢಶಾಲೆಗೆ ಜಿ.ಪಂ ಸಿಇಓ ಟಿ.ಭೂಬಾಲನ್ ಭೇಟಿ ನೀಡಿ ಪರಿಶೀಲಿಸಿದರು.
ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕೋವಿಡ್-19 ಹಿನ್ನೆಲೆಯಲ್ಲಿ ಕೈಗೊಳ್ಳಲಾದ ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲಿಸಿದರು. ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳ ಹಾಜರಾತಿ, ಗೈರು ಆದವರ ಮಾಹಿತಿಯನ್ನು ಕೇಂದ್ರದ ಮುಖ್ಯ ಅಧೀಕ್ಷಕರಿಂದ ಪಡೆದುಕೊಂಡರು. ಪರೀಕ್ಷೆ ಸುಗಮವಾಗಿ ನಡೆಯುತ್ತಿರುವುದನ್ನು ಕಂಡು ಹರ್ಷ ವ್ಯಕ್ತಪಡಿಸಿದರು.
ಟಿಇಟಿ ಪರೀಕ್ಷೆಗಳು ಎರಡು ಅವಧಿಯಲ್ಲಿ ನಡೆಸಿದ್ದು, ಬೆಳಗಿನ ಅವಧಿಯ ಪತ್ರಿಕೆ-1ರ ಪರೀಕ್ಷೆಗೆ ಒಟ್ಟು 8 ಪರೀಕ್ಷಾ ಕೇಂದ್ರಗಳಲ್ಲಿದ್ದು, ನೋಂದಣಿಯಾದ ಒಟ್ಟು 2798 ಅಭ್ಯರ್ಥಿಗಳ ಪೈಕಿ 2239 ಅಭ್ಯರ್ಥಿಗಳು ಹಾಜರಾಗಿ 559 ಅಭ್ಯರ್ಥಿಗಳು ಗೈರು ಹಾಜರಾಗಿದ್ದರು.
ಎರಡನೇ ಅವಧಿಯ ಮಧ್ಯಾಹ್ನ ನಡೆದ ಪತ್ರಿಕೆ-2ರ ಪರೀಕ್ಷೆಯು 19 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಿತು. ನೋಂದಣಿಯಾದ ಒಟ್ಟು 6370 ಅಭ್ಯರ್ಥಿಗಳ ಪೈಕಿ 5594 ಜನ ಹಾಜರಾಗಿ 776 ಜನ ಗೈರು ಹಾಜರಾಗಿರುತ್ತಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್. ಬಿರಾದಾರ ತಿಳಿಸಿದ್ದಾರೆ.