ಬಾಗಲಕೋಟೆ: ಆಧುನಿಕ ಜಗತ್ತಿನ ಫ್ಯಾಷನ್ ಭರಾಟೆಯ ನಡುವೆಯೂ ಉತ್ತರ ಕರ್ನಾಟಕ ಮಂದಿ ಕೆಲವೊಂದು ಸಾಂಪ್ರದಾಯಿಕ ಪದ್ದತಿಗಳು, ಆಚರಣೆಗಳನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ತಲೆತಲಾಂತರದಿಂದ ನಡೆದುಕೊಂಡು ಬಂದ ಸಂಪ್ರದಾಯಗಳು ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಜೀವಂತವಾಗಿವೆ.
ಗಣೇಶ ಹಬ್ಬದ ಬಳಿಕ ಜೋಕುಮಾರ ಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡು ಬರಲಾಗುತ್ತದೆ. ಉತ್ತರ ಕರ್ನಾಟಕದ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಜನಪದ ಆಚರಣೆಗಳಲ್ಲೊಂದಾದ ಜೋಕುಮಾರನ ಆಚರಣೆಯನ್ನು ಪ್ರತಿ ವರ್ಷದಂತೆ ಕೆಲವಡಿ,ತೆಗ್ಗಿ ಸೇರಿದಂತೆ ವಿವಿಧ ಗ್ರಾಮದಲ್ಲಿ ವಿಶಿಷ್ಟವಾಗಿ ಆಚರಿಸಲಾಗುತ್ತದೆ.
ಜೋಕುಮಾರನನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಿದರೆ, ಮಳೆ, ಬೆಳೆ ಚೆನ್ನಾಗಿ ಆಗುತ್ತದೆ ಎಂಬುದು ಜನರ ನಂಬಿಕೆ. ‘ಜೋಕುಮಾರ ಚಂದಗೇಡಿ ಸಿರಿಗೇಡಿ, ದಂಡೆಯಲ್ಲಿ ನಮ್ಮನ್ನು ಬಿಟ್ಟು ಬಂದ, ಚನ್ನಯ್ಯನ ಮನೆಯಲ್ಲಿ ಉಂಡು ಬಂದ’ ಎಂಬ ಸಾಂಪ್ರದಾಯಿಕ ಹಾಡುಗಳನ್ನು ಹಾಡುತ್ತ ಮಹಿಳೆಯರು ಜೋಕುಮಾರನನ್ನು ತಲೆಯ ಮೇಲೆ ಹೊತ್ತು ಮನೆಗಳಿಗೆ ತಿರುಗುತ್ತಿರುವ ದೃಶ್ಯ ಗ್ರಾಮಗಳಲ್ಲಿ ಕಂಡುಬರುತ್ತದೆ.
ಪ್ರತಿವರ್ಷ ಗಣೇಶ ಮೂರ್ತಿ ಪ್ರತಿಷ್ಠಾಪನೆಯಾದ ಐದು ದಿನಗಳ ನಂತರ ಜನಿಸುವ ಜೋಕುಮಾರ, ಕೃಷಿಕರ ಪಾಲಿನ ಆರಾಧ್ಯ ದೈವ. ರೈತರು ತಾವು ಬೆಳೆದ ಬೆಳೆಗೆ ಮಳೆ ತರುತ್ತಾನೆ ಎನ್ನುವ ನಂಬಿಕೆಯಿಂದ ಜೋಕುಮಾರಸ್ವಾಮಿಯನ್ನು ಆರಾಧಿಸುತ್ತಾರೆ. ಗುಳೇದಗುಡ್ಡ ಹೋಬಳಿ ವ್ಯಾಪ್ತಿಯ ಪರ್ವತಿ ಗ್ರಾಮದಿಂದಿ ಜೋಕುಮಾರನ ಜನಪದ ಶಿಲ್ಪವನ್ನು ಬುಟ್ಟಿಯಲ್ಲಿಟ್ಟುಕೊಂಡು ಹಂಸನೂರ ಕೋಟೆಕಲ್ ತೋಗಣಸಿ, ಮುರುಡಿ, ಹಾನಾಪೂರ ಕೇರಿ ಖಾನಾಪೂರ ಗ್ರಾಮಗಳಲ್ಲಿ ಸಂಭ್ರಮದಿಂದ ಜೋಕುಮಾರನನ್ನು ಪುಟ್ಟಿಯಲ್ಲಿ ಕುಳ್ಳಿರಿಸಿ ಪೂಜೆ ನೆರವೇರಿಸಿ, ಮನೆ ಮನೆಗೆ ತೆರಳುತ್ತಾರೆ. ರೈತಾಪಿ ಜನರು ಜೋಕುಮಾರನಿಗೆ ಮಳೆ ತರುವಂತೆ ಬೇಡಿಕೊಂಡರೆ, ಮಕ್ಕಳಾಗದ ಮಹಿಳೆಯರು ಹರಕೆ ಹೊರುತ್ತಾರೆ. ಏಳು ದಿನಗಳ ನಂತರ ಮಹಾತಂಗಿ ಮನೆತನದವರು, ಬಟ್ಟೆ ಒಗೆಯುವ ಅಗಸರ ಕಲ್ಲಿನ ಬುಡದಲ್ಲಿ ಜೋಕುಮಾರ ಸ್ವಾಮಿ ಮೂರ್ತಿ ಕೂರಿಸಿ ಬರುತ್ತಾರೆ. ಮೂರು ದಿನಗಳ ನಂತರ ಜೋಕುಮಾರನ ತಲೆಯಲ್ಲಿ ಹುಳುಗಳಾದರೆ ಮಳೆ ಚೆನ್ನಾಗಿ ಆಗುತ್ತದೆ ಎನ್ನುವ ನಂಬಿಕೆ ರೈತರದು. ಇಂದಿಗೂ ಈ ಆಚರಣೆಗಳೆಲ್ಲಾ ಈ ಜನರ ನಂಬಿಕೆಯ ಮೇಲೆಯೇ ನಿಂತಿವೆ.