ಬಾಗಲಕೋಟೆ: ಜಿಲ್ಲೆಯಲ್ಲಿ ಭಾರೀ ಮಳೆಯಾಗಿದ್ದು ಮುಧೋಳ ತಾಲೂಕಿನ ಒಂಟಗೋಡಿ ಕ್ರಾಸ್ ಬಳಿ ಯಾದವಾಡ ಹಳ್ಳದಲ್ಲಿ ಹಾಲು ತರಲು ಹೋಗಿ ವ್ಯಕ್ತಿ ನೀರು ಪಾಲಾಗಿರುವ ಘಟನೆ ನಡೆದಿದೆ.
ಬೈಕ್ನಲ್ಲಿ ಹೊರಟಿದ್ದ ಡಿಸಿಸಿ ಬ್ಯಾಂಕಿನ ಕ್ಲರ್ಕ್ ಸಂತೋಷ (34) ನೀರು ಪಾಲಾಗಿರುವ ವ್ಯಕ್ತಿ. ಮುಧೋಳ ಡಿಸಿಸಿ ಬ್ಯಾಂಕ್ನಲ್ಲಿ ಕ್ಲರ್ಕ್ ಆಗಿದ್ದರು. ಮೃತ ಸಂತೋಷ ಬೈಕ್ನಲ್ಲಿ ಹೋಗುವಾಗ ರಸ್ತೆಯಲ್ಲಿ ನೀರು ತುಂಬಿದ್ದು, ತಗ್ಗು ಪ್ರದೇಶದಲ್ಲಿ ಬಿದ್ದು ಮೃತಪಟ್ಟಿದ್ದಾರೆ.
ಮುಧೋಳ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಶವ ಹೂರಕ್ಕೆ ತೆಗೆದಿದ್ದಾರೆ. ಜಿಲ್ಲೆಯ ರಬಕವಿ-ಬನಹಟ್ಟಿ ಪಟ್ಟಣದಲ್ಲಿ ರಸ್ತೆ ತುಂಬಾ ನೀರು ತುಂಬಿ, ಸಂಚಾರಕ್ಕೆ ತೊಂದರೆ ಉಂಟಾಗಿದೆ. ಬಾಗಲಕೋಟೆ ನಗರ ಸೇರಿದಂತೆ, ಕೆರೂರು ಪಟ್ಟಣ, ಕಿರಸೂರ ಗ್ರಾಮದಲ್ಲಿ ಮನೆಗಳು ಕುಸಿದಿದ್ದು, ಹಾನಿಯಾಗಿದೆ.
ಜಿಲ್ಲೆಯಾದ್ಯಂತ ಕಳೆದ ರಾತ್ರಿಯಿಂದ ಭಾರಿ ಮಳೆ ಆಗುತ್ತಿದ್ದು, ಎಲ್ಲೆಡೆ ಹಳ್ಳ-ಕೊಳ್ಳ ತುಂಬಿ ಹರಿಯುತ್ತಿದೆ. ತುಳಸಿಗೇರಿ ಆಂಜನೇಯ ದೇವಾಲಯ ಬಳಿ ನೀರು ಸಂಗ್ರಹವಾಗಿ, ಭಕ್ತರ ದರುಶಕ್ಕೆ ತೊಂದರೆ ಉಂಟಾಗಿದೆ.
ಸತತ ಮಳೆ ಸುರಿಯುತ್ತಿರುವ ಪರಿಣಾಮ ಮುನ್ನೆಚ್ಚರಿಕೆ ಕ್ರಮವಾಗಿ ಜನತೆ ಸೂಕ್ತ ಸ್ಥಳಕ್ಕೆ ಸ್ಥಳಾಂತರ ಆಗಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.