ಬಾಗಲಕೋಟೆ : ಐತಿಹಾಸಿಕ ಹಿನ್ನೆಲೆಯ ಸಾಂಪ್ರದಾಯಿಕ ಉಡುಗೆಯಾಗಿರುವ ಗುಳೇದಗುಡ್ಡ ಖಣ ತನ್ನದೇ ಆದ ಪ್ರಖ್ಯಾತಿ ಪಡೆದುಕೊಂಡಿದೆ.
ಆದರೆ, ಇಂದಿನ ಆಧುನಿಕ ಫ್ಯಾಷನ್ ಯುಗದಿಂದಾಗಿ ಗುಳೇದಗುಡ್ಡ ಪಟ್ಟಣದಲ್ಲಿ ನೇಕಾರರು ತಯಾರಿಸುವ ರೇಷ್ಮೆ ಕುಬಸಕ್ಕೆ ಬೇಡಿಕೆ ಕಡಿಮೆಯಾಗುತ್ತಿದೆ.
ಇದರಿಂದ ಈ ಖಣಗಳಿಗೆ ನೇಕಾರರು ಹಾಗೂ ಇತರ ವ್ಯಾಪಾರಿಗಳು ಫ್ಯಾಶನ್ ಟಚ್ ನೀಡಿ ಮಾರಾಟ ಮಾಡುತ್ತಿದ್ದರು. ಇನ್ನೇನು ನೇಕಾರರ ಬಾಳು ಬಂಗಾರವಾಗಲಿದೆ ಎನ್ನುಲಾಗಲೇ ಕೊರೊನಾ ಹೊಡೆತದಿಂದ ತತ್ತರಿಸಿದ್ದಾರೆ.
ಕೊರೊನಾ 2ನೇ ಅಲೆಯು ಬರಸಿಡಿಲು ಬಡಿದಂತಾಗಿದೆ. ಇಲ್ಲಿನ ನೇಕಾರರು ತಯಾರಿಸುವ ಕುಬಸವು ಮಹಾರಾಷ್ಟ್ರ, ಆಂಧ್ರ ಹಾಗೂ ಕರ್ನಾಟಕ ರಾಜ್ಯದಲ್ಲಿ ಮಾತ್ರ ಹೆಚ್ಚು ಪ್ರಚಲಿತವಾಗಿದೆ. ಆದರೆ, ಕಳೆದ ವರ್ಷದಿಂದಲೂ ಮಹಾರಾಷ್ಟ್ರದಲ್ಲಿ ಕೊರೊನಾದಿಂದ ವ್ಯಾಪಾರ, ವಹಿವಾಟು ಸಂಪೂರ್ಣ ಕುಗ್ಗಿದೆ. ಇದರಿಂದ ಗುಳೇದಗುಡ್ಡ ಪಟ್ಟಣದ ನೇಕಾರರಿಗೆ ಹೊಡೆತ ಬಿದ್ದಿದೆ.
ಇಳಕಲ್ಲ ಸೀರೆ, ಗುಳೇದಗುಡ್ಡ ಖಣ ಹೆಚ್ಚು ಇಷ್ಟ ಪಡುವವರು ಹಾಗೂ ತೊಡುವವರು ಮಹಾರಾಷ್ಟ್ರ ರಾಜ್ಯದ ಮಹಿಳೆಯರು, ಹೀಗಾಗಿ, ಇಲ್ಲಿನ ನೇಕಾರರಿಗೆ ಪ್ರಮುಖ ಉದ್ಯೋಗ ಕೇಂದ್ರವಾಗಿತ್ತು.
ಇದರ ಜೊತೆಗೆ ಬೆಂಗಳೂರಲ್ಲೂ ಸಹ ಮಾರಾಟ ಮಾಡುತ್ತಿದ್ದರು. ಈ ಬಾರಿ ಮದುವೆ, ಶುಭ ಸಮಾರಂಭ ಇಲ್ಲದೆ ಗ್ರಾಹಕರು ಇಲ್ಲದೆ, ಖಣ ತಯಾರಿಸುವ ನೇಕಾರರು ಸಂಕಷ್ಟದಲ್ಲಿ ಜೀವನ ಸಾಗಿಸುವಂತಾಗಿದೆ.
ಕಳೆದ ವರ್ಷದಿಂದಲೂ ತಯಾರಿಸಿದ ಕುಬಸ ಇಲ್ಲಿಯವರೆಗೂ ಮಾರಾಟ ಆಗದೆ ಉಳಿದಿದೆ. ಕೊರೊನಾದಿಂದ ಹೆಚ್ಚು ತೊಂದರೆಗೆ ಒಳಗಾಗಿರುವ ಕೈಮಗ್ಗ ನೇಕಾರರಿಗೆ ಸರ್ಕಾರ ಪರಿಹಾರ ಧನ ಘೋಷಣೆ ಮಾಡಬೇಕು ಎಂದು ನೇಕಾರರು ಒತ್ತಾಯಿಸಿದ್ದಾರೆ.