ಬಾಗಲಕೋಟೆ: ಗೋವಾದ ಕ್ಯಾಸಿನೋದಲ್ಲಿ ಜೂಜಾಟದಿಂದ ಬಂದ ಹಣಕ್ಕಾಗಿಯೇ ನವನಗರದ ಬಾಲಕಿ ಅಪಹರಣ ನಡೆದಿರುವುದು ಬೆಳಕಿಗೆ ಬಂದಿದೆ.
ಅಕ್ಟೋಬರ್ 27ರಂದು ನವನಗರದ ಸೆಕ್ಟರ್ ನಂಬರ 61ರಲ್ಲಿ ಕೃತಿಕಾ ಕೊಡಗಾನೂರ (7) ಎಂಬ ಬಾಲಕಿಯನ್ನು ಅಪಹರಣ ಮಾಡಲಾಗಿತ್ತು. ಅಪಹರಣ ಆಗಿರುವ ಬಾಲಕಿ ಸಹೋದರ ಮಾವ ಅನಿಲ ಎಂಬುವನು ಗೋವಾಗೆ ಹೋಗಿ ಕ್ಯಾಸಿನೋದಲ್ಲಿ ಅಂದಾಜು 45 ಲಕ್ಷ ರೂಪಾಯಿಗಳು ತೆಗೆದುಕೊಂಡು ಬಂದಿದ್ದನು.
ಅಪಹರಣಕ್ಕೆ ಪ್ಲ್ಯಾನ್ ಮಾಡಿದ ಪ್ರಮುಖ ಆರೋಪಿ ಭೀರಪ್ಪ ಬೂದಿಹಾಳ ಎಂಬುವನು ಅನಿಲ ಜೊತೆಗೆ ಆಗಾಗ ಗೋವಾಕ್ಕೆ ಹೋಗಿ ಕ್ಯಾಸಿನೋದಲ್ಲಿ ಜೂಜಾಟುತ್ತಿದ್ದರು ಎನ್ನಲಾಗಿದೆ. ಸಹೋದರ ಮಾವ ಅನಿಲ ಎಂಬುವನಿಗೆ ಹಣ ಬಂದಿರುವ ಮಾಹಿತಿಯಿಂದ ಬಾಲಕಿಯನ್ನು ಅಪಹರಣ ಮಾಡಿ, ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಈ ಬಗ್ಗೆ ಬಾಲಕಿ ತಾಯಿ ಸುನೀತಾ ಎಂಬುವರು ದೂರು ನೀಡಿದ ಹಿನ್ನೆಲೆ ಪೊಲೀಸರು ಕಾರ್ಯಾಚರಣೆ ನಡೆಸಿ,18 ಗಂಟೆಯಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಗದ್ದನಕೇರಿ ಗ್ರಾಮದ ಭೀರಪ್ಪ ದುಂಡಪ್ಪ ಬೂದಿಹಾಳ, ಪ್ರಫುಲ್ ಮಲ್ಲಿಕಾರ್ಜುನ ಪಾಟೀಲ, ಈರಣ್ಣ ನೀಲಕಂಠಪ್ಪ ದಿವಟಗಿ ಹಾಗೂ ಕಮತಗಿ ಗ್ರಾಮದ ಕೃಷ್ಣ ದಾಸರ ಎಂಬುವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಸಾರ ತಿಳಿಸಿದ್ದಾರೆ.
ಕಳ್ಳತನ ಪ್ರಕರಣ ಬೇಧಿಸಿದ ಖಾಕಿ : ಇದರ ಜೊತೆಗೆ ಜಿಲ್ಲೆಯಲ್ಲಿ ವಿವಿಧ ಪ್ರದೇಶದಲ್ಲಿ ಆಗಿರುವ ಕಳ್ಳತನ ಪ್ರಕರಣ ಬೇಧಿಸಿದ್ದು, ಒಂದು ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣ ವಾಪಸ್ ನೀಡಲಾಗಿದೆ. ಇದರ ಜೊತೆಗೆ ಯಾವುದೇ ಆನ್‌ಲೈನ್ ದೋಖಾ ಪ್ರಕರಣ ಸಂಬಂಧಪಟ್ಟಂತೆ ನಗರದಲ್ಲಿ ಇರುವ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಬಹುದು.
ದೂರು ನೀಡಿದ ತಕ್ಷಣವೇ ಬ್ಯಾಂಕಿನಿಂದ ಹಣವನ್ನು ವಾಪಸ್ ಕೊಡಿಸುವ ಕೆಲಸ ಮಾಡಲಾಗುತ್ತದೆ. ಈ ಬಗ್ಗೆ ಯಾರೇ ಆಗಲಿ, ಆನ್ಲೈನ್ನಲ್ಲಿ ದೋಖಾ ಆದಲ್ಲಿ ತಕ್ಷಣವೇ ಸಿಇಎನ್ ಠಾಣೆಯಲ್ಲಿ ದೂರು ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಸಾರ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.