ಬಾಗಲಕೋಟೆ: ಉತ್ತರ ಕರ್ನಾಟಕದಲ್ಲಿ ಉಂಟಾಗಿದ್ದ ಪ್ರವಾಹವು ಅಕ್ಷರಶಹ ಜನರನ್ನು ಬೀದಿಪಾಲಾಗುವಂತೆ ಮಾಡಿದೆ. ಆದ್ರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂತ್ರಸ್ತರ ಬಗ್ಗೆ ಕಾಳಜಿಯಿಲ್ಲದಂತೆ ವರ್ತಿಸುತ್ತಿವೆ ಎಂದು ಮಾಜಿ ಸಚಿವೆ ಉಮಾಶ್ರೀ ಕಿಡಿಕಾರಿದರು.
ಶನಿವಾರ ಬನಹಟ್ಟಿಯಲ್ಲಿ ತೇರದಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ನೆರೆ ಸಂತ್ರಸ್ತರಿಗೆ ಪರಿಹಾರ ಘೋಷಣೆಗೆ ಒತ್ತಾಯಿಸಿ ನಡೆಸಿದ ಪ್ರತಿಭಟನಾ ರ್ಯಾಲಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ಕೂಡಲೇ ಕೇಂದ್ರದಿಂದ ಸೂಕ್ತ ಪರಿಹಾರ ಒದಗಿಸಿ, ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ಉಮಾಶ್ರೀ ಆಗ್ರಹಿಸಿದ್ರು.
ಕೃಷ್ಣಾ ನದಿಯಿಂದ ಸುಮಾರು 6.7 ಲಕ್ಷ ಕ್ಯೂಸೆಕ್ನಷ್ಟು ನೀರು ನೂರಾರು ಗ್ರಾಮಗಳಿಗೆ ನುಗ್ಗಿ ಹಿಂದೆಂದೂ ಕಾಣದಂತಹ ಅನಾಹುತ ಸಂಭವಿಸಿದೆ. ಕೃಷ್ಣೆಯೊಂದಿಗೆ ಘಟಪ್ರಭಾ, ಮಲಪ್ರಭಾ, ಹಿರಣ್ಯಕೇಶಿ ಸೇರಿದಂತೆ ಅನೇಕ ನದಿಗಳ ಪ್ರವಾಹದಿಂದ ಲಕ್ಷಾಂತರ ಕುಟುಂಬಗಳು ಬೀದಿಪಾಲಾಗಿವೆ. ಈ ಕುಟುಂಬಗಳಿಗೆ ಕೇವಲ 10 ಸಾವಿರ ರೂ.ಗಳನ್ನು ಒದಗಿಸುವ ಮೂಲಕ ರಾಜ್ಯ ಸರ್ಕಾರ ಕೈತೊಳೆದುಕೊಂಡಿದೆ ಎಂದು ಉಮಾಶ್ರೀ ಗುಡುಗಿದ್ರು.
ರಾಜ್ಯ ಹಾಗೂ ಕೇಂದ್ರ ತಕ್ಷಣವೇ ನೆರೆ ಸಂತ್ರಸ್ತರ ಅಭಿವೃದ್ಧಿಗೆ ಸಹಕರಿಸಬೇಕು. ದಾನಿಗಳು ಸಂತ್ರಸ್ತರಿಗೆಂದು ನೀಡಿರುವ ಸಾಮಗ್ರಿಗಳನ್ನು ಅವರಿಗೆ ನೀಡದೆ ಗೋಡೌನಿನಲ್ಲಿ ಸಂಗ್ರಹಿಸಿಡಲಾಗಿದೆ. ಅವುಗಳನ್ನು ಸಂತ್ರಸ್ತರಿಗೆ ವಿತರಿಸಿ ಎಂದು ಒತ್ತಾಯಿಸಿದರು.
ಪ್ರತಿಭಟನಾ ರ‍್ಯಾಲಿದಲ್ಲಿ ಮಲ್ಲಪ್ಪ ಸಿಂಗಾಡಿ, ಲಕ್ಷ್ಮಣ ದೇಸಾರೆಟ್ಟಿ, ರಾಜೇಂದ್ರ ಭದ್ರಣ್ಣವರ, ಶಂಕರ ಜಾಲಿಗಿಡದ, ಚಂದ್ರು ಪಟ್ಟಣ, ಚನವೀರಪ್ಪ ಹಾದಿಮನಿ ಸೇರಿದಂತೆ ರಬಕವಿ-ಬನಹಟ್ಟಿ ತಾಲೂಕಿನ 10 ಗ್ರಾಮಗಳ ಹಲವಾರು ಸಂತ್ರಸ್ತರು ಭಾಗವಹಿಸಿದ್ದರು.