ಬಾಗಲಕೋಟೆ: ಇತ್ತೀಚೆಗೆ ಜಮಖಂಡಿ ತಾಲೂಕಿನ ಕುಂಬಾರಹಳ್ಳ ಗ್ರಾಮದಲ್ಲಿ ಕಾಣಿಸಿಕೊಂಡಿದ್ದ ಚಿರತೆ ಇದುವರೆಗೂ ಸೆರೆ ಸಿಕ್ಕಿಲ್ಲ. ಕಳೆದ ಎಂಟು ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿರುವ ಅರಣ್ಯ ಅಧಿಕಾರಿಗಳಿಗೆ ಚಾಲಾಕಿ ಚಿರತೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಕಳೆದ ಗುರುವಾರ ಗ್ರಾಮದ ತಾ.ಪಂ ಮಾಜಿ ಸದಸ್ಯ ನಿಂಗಪ್ಪ ಹೆಗಡೆ ಅವರ ತೋಟದಲ್ಲಿದ್ದ ಸಾಕು ನಾಯಿಯನ್ನು ಚಿರತೆ ತಿಂದಿತ್ತು. ಕಳೆದ 7 ದಿನಗಳಿಂದ ಕ್ಯಾಮರಾ ಕಣ್ಣಿಗೂ ಕಾಣಿಸಿಕೊಳ್ಳದೆ ಹೆಜ್ಜೆ ಗುರುತುಗಳನ್ನು ಮಾತ್ರ ಬಿಟ್ಟು ಹೋಗುತ್ತಿದೆ.
ಬುಧವಾರ ಮತ್ತು ಗುರುವಾರ ಬೆಳಗಾವಿ ರಾಣಿ ಚೆನ್ನಮ್ಮ ಮಿನಿ ಪ್ರಾಣಿ ಸಂಗ್ರಹಾಲಯದ ವೈದ್ಯೆ ನಿರುಪಮಾ ಅವರು ಅರವಳಿಕೆ ಗನ್‍ನೊಂದಿಗೆ ಕಾರ್ಯಾಚರಣೆ ನಡೆಸಿದರೂ ಚಿರತೆಯ ಸುಳಿವು ಸಿಕ್ಕಿಲ್ಲ. ಈಗಾಗಲೇ ಬೀಳಗಿ, ಮುಧೋಳ, ಜಮಖಂಡಿ ತಾಲೂಕಿನಿಂದ 20 ಜನ, ಬೆಳಗಾವಿಯಿಂದ 3 ಜನ, ನೆಸರ್ಗಿಯಿಂದ 2 ಜನ ಸಿಬ್ಬಂದಿ ಆಯುಧ ಸಮೇತ ಘಟನಾ ಸ್ಥಳದಲ್ಲಿ ಚಿರತೆ ಸೆರೆಗೆ ಶೋಧ ನಡೆಸುತಿದ್ದಾರೆ.
ಚಿರತೆ ಪತ್ತೆಗೆ ಡ್ರೋನ್ ಬಳಕೆ
ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿಗಳ ಕಚೇರಿಯಿಂದ ಡ್ರೋನ್ ಕ್ಯಾಮರಾ ಮೂಲಕ ಚಿರತೆ ಶೋಧ ಮಾಡಲಾಯಿತು. ವ್ಯಾಘ್ರ ದಾಳಿ ನಡೆಸಿದ ಸುಮಾರು 1 ಕಿ.ಮೀಯಷ್ಟು ಪ್ರದೇಶವನ್ನು ಶೋಧಿಸಲಾಯಿತು. ಎಲ್ಲಿಯೂ ಚಿರತೆಯ ಸುಳಿವು ಸಿಗಲಿಲ್ಲ. ಬೆಳಗಾವಿಯಿಂದ ಆಗಮಿಸಿರುವ ಶಸ್ತ್ರ ಸಜ್ಜಿತ ಸಿಬ್ಬಂದಿ ಕುಂಬಾರಹಳ್ಳ ಗ್ರಾಮದಲ್ಲಿ ಎರಡು ಡಬಲ್ ಬ್ಯಾರಲ್ ಗನ್ ಮೂಲಕ ಪ್ರಾಯೋಗಿಕವಾಗಿ ಗಾಳಿಯಲ್ಲಿ ಗುಂಡು ಹಾರಿಸಿದರು.
ಜಮೀನುಗಳಲ್ಲಿ ಸುಮಾರು 6 ಬೋನ್ಗಳು, 15ಕ್ಕೂ ಅಧಿಕ ಸಿಸಿ ಕ್ಯಾಮರಾಗಳನ್ನು ಅಳವಡಿಸಿದ್ದಾರೆ. ಚಿರತೆ ದಾಳಿ ಮಾಡಿದ ಸ್ಥಳದ ಹತ್ತಿರ ಎತ್ತರವಾದ ಕಬ್ಬಿನ ಗದ್ದೆಯಲ್ಲಿ ಚಿರತೆ ಅಡುಗಿ ಕುಳಿತಿರಬಹುದು ಎಂದು ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ. ಬೋನ್ನಲ್ಲಿ ಶ್ವಾನ ಕಟ್ಟಿ ಚಿರತೆಯನ್ನು ಖೆಡ್ಡಾಗೆ ಕೆಡವಲು ಮುಂದಾಗಿದ್ದಾರೆ.
ಎಲ್ಲಾ ಸಾಮಗ್ರಿಗಳ ಮೂಲಕ ಬೀಡು ಬಿಟ್ಟು ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಗುರುವಾರ ಅರಣ್ಯ ಸಿಬ್ಬಂದಿ ನೇತೃತ್ವದಲ್ಲಿ ಕಬ್ಬು ಕಟಾವು ಮಾಡಲಾಯಿತು. ಅಧಿಕಾರಿಗಳು ಜಮೀನುಗಳಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸುವ ಮೂಲಕ ಚಿರತೆ ಸೆರೆ ಹಿಡಿಯಲು ಸಿದ್ಧರಾಗಿದ್ದಾರೆ.