ಬಾಗಲಕೋಟೆ: ಮಹಾರಾಷ್ಟ್ರ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಮಳೆ ಹೆಚ್ಚಾಗುತ್ತಿರುವ ಹಿನ್ನೆಲೆ ಜಿಲ್ಲೆಯ ಕೃಷ್ಣಾ ಹಾಗೂ ಘಟಪ್ರಭಾ ನದಿಗಳು ತುಂಬಿ ಹರಿಯುತ್ತಿದ್ದು, ಪ್ರವಾಹ ಭೀತಿ ಎದುರಾಗಿದೆ.
ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ ನೀರು ಹರಿದು ಬರುತ್ತಿರುವ ಪರಿಣಾಮ ಮುಧೋಳ ತಾಲೂಕಿನ ಮಾಚಕನೂರು ಹೊಳೆ ಬಸವೇಶ್ವರ ದೇವಾಲಯವನ್ನು ನೀರು ಸುತ್ತುವರಿದಿದೆ.
ಗ್ರಾಮ ಜಲಾವೃತವಾಗುವ ಭೀತಿಯಲ್ಲಿ ಗ್ರಾಮಸ್ಥರು ಇದ್ದಾರೆ. ಕಳೆದ ಬಾರಿ ಸಂಪೂರ್ಣ ಜಲಾವೃತವಾಗಿದ್ದ ಐತಿಹಾಸಿಕ ಮಾಚಕನೂರು ದೇಗುಲ, ಈ ಬಾರಿ ಅವಧಿಗೂ ಮುನ್ನ ನೀರು ಸುತ್ತುವರಿದ ಪರಿಣಾಮ ಪ್ರವಾಹದ ಭೀತಿ ಎದುರಾಗಿದೆ.
ಇನ್ನು ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಕೃಷ್ಣಾ ನದಿಯು ಸಹ ತುಂಬಿ ಹರಿಯುತ್ತದೆ. ಇದರಿಂದ ಹಿಪ್ಪರಗಿ ಜಲಾಶಯದ ಮೂಲಕ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದು ಬಂದು ಆಲಮಟ್ಟಿ ಜಲಾಶಯದ ಹಿನ್ನೀರನಲ್ಲಿ ಸಂಗ್ರಹವಾಗುತ್ತಿದೆ. ಈ ಬಾರಿ ಚಂಡಮಾರುತದಿಂದ ಮಳೆ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಜಮಖಂಡಿ ಹಾಗೂ ಮುಧೋಳ ತಾಲೂಕಿನಲ್ಲಿ ಪ್ರವಾಹ ಭೀತಿ ಎದುರಾಗುವ ಸಾಧ್ಯತೆ ಇದೆ.