ಬಾಗಲಕೋಟೆ: ಮುಧೋಳ ಪಟ್ಟಣದಲ್ಲಿ ಹಲವು ವರ್ಷಗಳಿಂದ ಮುಸ್ಲಿಂ ಸಯುದಾಯದ ಕೆಲವರು ಕಲ್ಲಿನಿಂದ ಮಾಡುವ ಗೃಹ ಉಪಯೋಗಿ ವಸ್ತುಗಳ, ಸಮಾಧಿ ಕಲ್ಲು, ದೇವರು, ಸಾಧು ಸಂತರು ಹೀಗೆ ನಾನಾ ರೀತಿಯ ಕಲ್ಲಿನ ಕೆತ್ತನೆ ಮೂಲಕ ಜೀವನ ಸಾಗಿಸುತ್ತಿದ್ದಾರೆ.
ಲಾಲಸಾಬ್, ಬಂದೇನವಾಜ್, ಉಮನ್, ಮಹಮ್ಮದ್ ಹೀಗೆ ಹಲವಾರು ಮುಸ್ಲಿಂ ಸಮುದಾಯದ ಕೆಲ ಕುಟುಂಬಗಳು ಬೀಸುಕಲ್ಲು, ರುಬ್ಬುವ ಗುಂಡು, ಸಮಾಧಿ ಕಟ್ಟಡ ಹಾಗೂ ಚಿಕ್ಕಪುಟ್ಟ ಕಲ್ಲಿನ ಲಿಂಗ, ಬಸವಣ್ಣ ಮೂರ್ತಿ ಸಹ ತಯಾರಿಸುತ್ತಾರೆ. ಮುಧೋಳ ಪಟ್ಟಣದಲ್ಲಿ ಪ್ರಮುಖ ರಸ್ತೆಯಲ್ಲಿ ಹಾಗೂ ಬಸ್ ನಿಲ್ದಾಣ ಹತ್ತಿರ ಇರುವ ಪ್ರಾರ್ಥನಾ ಮಂದಿರ ಬಳಿ ಹಾಗೂ ತಮ್ಮ ಮನೆಯ ಹತ್ತಿರ ನೂರಕ್ಕೂ ಹೆಚ್ಚು ಕುಟುಂಬದವರು ಕಲ್ಲು ಕೆತ್ತನೆ ಮಾಡುತ್ತಾರೆ.
ವಿಜಯಪುರ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಪಕ್ಕದ ಮಹಾರಾಷ್ಟ್ರದ ಜನರು ಇಲ್ಲಿ ಕೆತ್ತಿದ ಕಲ್ಲುಗಳನ್ನು ತೆಗೆದುಕೊಂಡು ಹೋಗಲು ಬರುತ್ತಾರೆ. ಬಿಸುವ ಕಲ್ಲು, ರುಬ್ಬವ ಕಲ್ಲು 500 ರೂಪಾಯಿಗಳಿಂದ 3 ಸಾವಿರ ವರೆಗೆ ಮಾರಾಟ ಮಾಡಲಾಗುತ್ತದೆ. ಆದರೆ, ವ್ಯಾಪಾರ ಉತ್ತಮವಾಗಿಲ್ಲದಿದ್ದರೂ ಹಿಂದಿನಿಂದ ಇದೇ ಉದ್ಯೋಗ ಅವಲಂಬಿಸಿರುವುದರಿಂದ ಅನಿವಾರ್ಯವಾಗಿ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.
ಮುಧೋಳ ಪಟ್ಟಣದ ಹೊರವಲಯದಲ್ಲಿ ಸಿಗುವ ಕಲ್ಲುಗಳನ್ನು ತಂದು ಮುಂಜಾನೆಯಿಂದ ಸಂಜೆಯವರೆಗೆ ಕೈಯಿಂದ ಕೆತ್ತಿ ಆಕಾರ ನೀಡುತ್ತಾರೆ. ಇಷ್ಟು ಕಠಿಣ ಕೆಲಸ ದಿಂದ ತಿಂಗಳಿಗೆ 5 ರಿಂದ 7 ಸಾವಿರ ರೂ. ವರೆಗೆ ಆದಾಯ ಬರುತ್ತದೆ. ಸರ್ಕಾರದಿಂದ ಯಾವುದೇ ಯೋಜನೆ ಸಿಕ್ಕಿಲ್ಲ. ಬ್ಯಾಂಕಿನಿಂದ ಸಾಲ ಸೂಲ ಮಾಡಬೇಕು ಅಂದರೆ, ಈ ಉದ್ಯೋಗಕ್ಕೆ ಸಾಲ ನೀಡಿಲ್ಲ. ಮುಂಜಾನೆಯಿಂದ ದುಡಿದರೆ ಮಾತ್ರ ಒಪ್ಪೊತ್ತಿನ ಊಟ. ಹೀಗಾಗಿ ಸರ್ಕಾರದಿಂದ ಪ್ರೋತ್ಸಾಹ ಸಿಗುವಂತಾಗಬೇಕು ಎಂದು ಇವರು ವಿನಂತಿಸಿಕೊಂಡಿದ್ದಾರೆ.