ಬಾಗಲಕೋಟೆ: ಕಳೆದ ರಾತ್ರಿ ಉಂಟಾದ ಭಾರಿ ಗಾಳಿ-ಮಳೆಯಿಂದಾಗಿ ಬೀಳಗಿ ಪಟ್ಟಣದ ಸಮೀಪದ 110ಕೆ.ವಿ ಹೈಟೆನ್ಷನ್ ವಿದ್ಯುತ್ ಕಂಬವೊಂದು ಮುರಿದು ಬಿದ್ದಿದ್ದು, ವಜ್ಜರಮಟ್ಟಿಯಿಂದ ಕಾತರಕಿವರೆಗಿನ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ.
ಬೀಳಗಿ ತಾಲೂಕು ವ್ಯಾಪ್ತಿಯಲ್ಲಿ ಬರುವ ಕಾತರಕಿ, ಸಿರಗುಪ್ಪಿ, ಬೀಳಗಿ, ಗಿರಿಸಾಗರ ಬಿಸನಾಳ ಹಾಗೂ ತೋಳಮಟ್ಟಿ ಉಪ ಕೇಂದ್ರಗಳಿಗೆ ಸಂಪೂರ್ಣ ವಿದ್ಯುತ್ ಕಡಿತಗೊಂಡ ಹಿನ್ನೆಲೆ, ಹೆಸ್ಕಾಂ ಅಧಿಕಾರಿಗಳು ಹಾಗೂ ಕೆಪಿಟಿಸಿಎಲ್ ಅಧಿಕಾರಿಗಳು ಸ್ಥಳಕ್ಕಾಗಮಿಸಿ ವಿದ್ಯುತ್ ಲೈನ್ ಸರಿಪಡಿಸಲು ಕಾರ್ಯಪ್ರವೃತ್ತರಾಗಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಬೀಳಗಿ ಉಪವಿಭಾಗಾಧಿಕಾರಿ ವಿಜಯಕುಮಾರ್, ಕಳೆದ ರಾತ್ರಿಯಿಂದಲೇ ವಿದ್ಯುತ್ ಸಂಪರ್ಕ ಕಡಿತಗೊಂಡು ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ. ಶೀಘ್ರವಾಗಿ ಕೆಲಸ ಪೂರ್ಣಗೊಳಿಸಿ, ವಿದ್ಯುತ್ ಸರಬರಾಜು ಮಾಡಲಾಗುತ್ತದೆ ಎಂದರು.