ಬಾಗಲಕೋಟೆ : ಸಚಿವ ಮುರುಗೇಶ ನಿರಾಣಿ ಹಾಗೂ ಶಾಸಕ ಬಸವಗೌಡ ಪಾಟೀಲ ಪರಸ್ಪರ ಟೀಕೆ ಮಾಡುತ್ತಿದ್ದಾರೆ. ಈ ವೇಳೆ ನಿರಾಣಿಯವರು ಯತ್ನಾಳ್ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ. ಜೊತೆಗೆ ಯತ್ನಾಳ್ ಅವರು ನಿರಾಣಿ ಅವರನ್ನು ಪಿಂಪ್ ಮಂತ್ರಿ ಎಂದು ಕರೆದಿದ್ದಾರೆ. ಸಚಿವರು ಮತ್ತು ಶಾಸಕರು ಪರಸ್ಫರ ಗಂಭೀರ ಆರೋಪಗಳನ್ನು ಮಾಡಿದ್ದು, ಈ ಬಗ್ಗೆ ಗೃಹ ಸಚಿವರು ಸ್ವಯಂಪ್ರೇರಿತ ಕೇಸ್ ದಾಖಲಿಸಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ನಿರಾಣಿ ಮತ್ತು ಯತ್ನಾಳ್ ವಿರುದ್ಧ ಕ್ರಮಕೈಗೊಳ್ಳಲಿ : ನಗರದಲ್ಲಿ ಪ್ರಜಾಧ್ವನಿ ಸಮಾರಂಭದಲ್ಲಿ ಭಾಗವಹಿಸಲು ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಪಕ್ಷದ ಸಂಸ್ಕೃತಿ, ಅವರ ಧರ್ಮ, ಬಿಜೆಪಿ ನೀತಿ, ಬಿಜೆಪಿ ಸಿದ್ದಾಂತ ಅವರು ಹೇಳುತ್ತಿದ್ದಾರೆ. ಶಾಸಕ ಯತ್ನಾಳ್ ವಿರುದ್ಧ ನಿರಾಣಿ ಕೊಲೆ ಆರೋಪ ಮಾಡಿದ್ದಾರೆ. ಒಬ್ಬ ಸಚಿವರು ಈ ರೀತಿ ಹೇಳಿದ್ದಾರೆ. ಈ ಬಗ್ಗೆ ಕೂಡಲೇ ಎಫ್ಐಆರ್ ದಾಖಲಿಸಬೇಕು. ಯಾಕೆ ಇನ್ನೂ ಗೃಹ ಸಚಿವರು ಎಫ್ಐಆರ್ ಹಾಕುತ್ತಿಲ್ಲ. ಈ ಕೂಡಲೇ ಸುಮೋಟೋ ಕೇಸ್ ದಾಖಲಿಸಿ ಪ್ರಕರಣದ ತನಿಖೆ ನಡೆಸಲಿ ಎಂದು ಡಿ.ಕೆ. ಶಿವಕುಮಾರ್ ಒತ್ತಾಯಿಸಿದರು.
ಇನ್ನೊಂದೆಡೆ, ಯತ್ನಾಳ್ ಅವರು ಮುರುಗೇಶ್ ನಿರಾಣಿ ಅವರನ್ನು ಪಿಂಪ್ ಎಂದು ಕರಿತಾರೆ. ಒಬ್ಬ ಮಂತ್ರಿ ಪಿಂಪ್ ಎಂದು ಹೇಳಿದರೆ, ಯಾರ್ಯಾರಿಗೆ ಏನೇನು ವ್ಯವಹಾರ ಮಾಡಿದರು ಎಂಬುದು ಗೊತ್ತಾಗಬೇಕಲ್ಲ. ಅವರು ಒಬ್ಬ ಕೇಂದ್ರ ಮಂತ್ರಿ ಆಗಿದ್ದವರು, ಶಾಸಕರಾಗಿದ್ದವರು. ಅವರದ್ದು ಒಂದು ಕೇಸ್ ತಗೋಬೇಕಿತ್ತಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದರು. ಈ ಎಲ್ಲ ಪದಗಳು ನಾವು ಹೇಳಿದ್ದಲ್ಲ. ಅವರ ಬಾಯಿಂದ ಬಂದ ನುಡಿ ಮುತ್ತುಗಳು. ಯತ್ನಾಳ್ ಹಾಗೂ ನಿರಾಣಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಲಿ ಎಂದು ಇದೇ ವೇಳೆ ಆಗ್ರಹಿಸಿದರು.
ಈ ಸರ್ಕಾರ ಜನ ಸಾಮಾನ್ಯರಿಗೆ ಹೊರೆ : ಕಾಂಗ್ರೆಸ್ ವತಿಯಿಂದ ಪ್ರಜಾಧ್ವನಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ನಾ ನಾಯಕಿ ಸಮಾವೇಶದಲ್ಲಿ ಮಹಿಳೆಯರು ನೋವು ತೋಡಿಕೊಂಡಿದ್ದಾರೆ. ಮನೆ ಯಜಮಾನಿಗೆ ಪ್ರತಿ ತಿಂಗಳಿಗೆ 2 ಸಾವಿರ ರೂ ನೇರವಾಗಿ ಅವರ ಖಾತೆಗೆ ಹಾಕುತ್ತೇವೆ. ಎರಡನೇ ಭರವಸೆ, ಪ್ರತಿ ಮನೆಗೂ 200 ಯುನಿಟ್ ವಿದ್ಯುತ್ನ್ನು ಉಚಿತವಾಗಿ ಕೊಡುತ್ತೇವೆ. ಈ ಸರ್ಕಾರ ಬೆಲೆ ಏರಿಕೆ ಮಾಡಿ, ಸಾಮಾನ್ಯ ಜನರಿಗೆ ಹೊರೆಯಾಗಿದೆ ಎಂದು ಹೇಳಿದರು.
ಫೆಬ್ರವರಿ 2ಕ್ಕೆ ಟಿಕೆಟ್ ಆಕಾಂಕ್ಷಿಗಳ ಅಂತಿಮಪಟ್ಟಿ ಬಿಡುಗಡೆ : ನಾವು ಬಸವಣ್ಣನ ನಾಡಿನಲ್ಲಿ ಇದ್ದೇವೆ. ನಾವು ಮಾತುಕೊಟ್ಟಂತೆ ನಡೆಯುತ್ತೇವೆ. ನಾವಿದ್ದಾಗ ಪವರ್ 10 ಸಾವಿರ ಮೆಗಾವ್ಯಾಟ್ ಇತ್ತು. ನಾನು ಇಳಿಯುವಾಗ 20 ಸಾವಿರ ಮೆಗಾವ್ಯಾಟ್ ಆಯಿತು. ಈ ಯೋಜನೆ ಹೇಗೆ ಜಾರಿಗೆ ತರಬಹುದು, ಹೇಗೆ ಉಳಿತಾಯ ಮಾಡಬಹುದು ಎಂದು ತೋರಿಸುತ್ತೇನೆ. ಆರ್ ಅಶೋಕ್ ಏನೋ ಮಾತಾಡ್ತಾರೆ ಎಂದು ಡಿಕೆ ಶಿವಕುಮಾರ್ ಅಶೋಕ್ ಅವರಿಗೆ ಟಾಂಗ್ ನೀಡಿದರು. ಫೆಬ್ರವರಿ 2ರಂದು ಬೆಂಗಳೂರಲ್ಲಿ ಸ್ಟೇಟ್ ಎಲೆಕ್ಷನ್ ಕಮಿಟಿ ಸಭೆ ನಡೆಸಲಾಗುತ್ತದೆ. ಆ ಸಭೆಯಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯನ್ನು ಅಂತಿಮಗೊಳಿಸುವ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.
ಒಂದು ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧೆ : ಸಿದ್ದು ಸ್ಪರ್ಧೆ ವಿಚಾರವಾಗಿ ಮಾತನಾಡಿ, ಸಿದ್ದರಾಮಯ್ಯ ಅವರು ತಾವು ಒಂದು ಕಡೆಯಿಂದ ಸ್ಪರ್ಧಿಸುವುದಾಗಿ ನೇರವಾಗಿ ಹೇಳಿದ್ದಾರೆ. ಒಂದು ಕಡೆಗೆ ಅರ್ಜಿ ಹಾಕಿದ್ದಾರೆ. ಪಕ್ಷ ಈ ಬಗ್ಗೆ ತೀರ್ಮಾಣ ತೆಗೆದುಕೊಳ್ಳುತ್ತದೆ ಎಂದರು. ಮೋದಿ ರಾಜ್ಯ ಪ್ರವಾಸ ಬಗ್ಗೆ ಪ್ರತಿಕ್ರಿಯಿಸಿ, ಅಮಿತ್ ಶಾ ಅವರು ರಾಜ್ಯ ಚುನಾವಣೆಯನ್ನು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಅಲ್ಲ ಮೋದಿ ನಾಯಕತ್ವದಲ್ಲಿ ಚುನಾವಣೆಯನ್ನು ಎದುರಿಸುತ್ತೇವೆ ಎಂದು ಹೇಳಿದ್ದಾರೆ. ಅಂದರೆ, ರಾಜ್ಯದಲ್ಲಿ ಆಡಳಿತ ವಿಫಲವಾಗಿ ಎಂದು ಅಮಿತ್ ಶಾ ಹೇಳಿಕೆಯಿಂದ ಗೊತ್ತಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ : ನಾನು ಸ್ಪರ್ಧೆ ಮಾಡೋದು ಒಂದೇ ಕ್ಷೇತ್ರದಿಂದ: ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ