ಬಾಗಲಕೋಟೆ : ಎಸ್ಸಿ-ಎಸ್ಟಿ ಜನಾಂಗದವರಗಿಂತ ನೇಕಾರರ ಪರಿಸ್ಥಿತಿ ಚಿಂತಾಜನಿಕವಾಗಿದೆ. 20 ಜನಕ್ಕೆ ₹55 ಲಕ್ಷ ಸಾಲ ನೀಡದೆ ಇರುವ ಜವಳಿ ಅಧಿಕಾರಿಯನ್ನು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತರಾಟೆ ತೆಗೆದುಕೊಂಡಿರುವ ಘಟನೆ ಬಾಗಲಕೋಟೆಯಲ್ಲಿ ನಡೆಯಿತು.
ವಿಜಯಮಲ್ಯಗೆ ಸಾವಿರಾರು ಕೋಟಿ ಸಾಲ ನೀಡುತ್ತೀರಿ. ಆದರೆ, ಶ್ರಮಜೀವಿಗಳಾದ ನೇಕಾರರಿಗೆ ಸಾಲ ಸೌಲಭ್ಯ ಏಕೆ ನೀಡುತ್ತಿಲ್ಲ ಎಂದು ಡಿಸಿಎಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕೃಷ್ಣ ಮೇಲ್ದಂಡೆ ಯೋಜನೆಯ ಸಮಸ್ಯೆಗಳ ಬಗ್ಗೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ನಂತರ ಜವಳಿ ಇಲಾಖೆ ಉಪ ನಿರ್ದೇಶಕಿ ಶ್ರೀಮತಿ ಭಾರತಿ ಬಿದರಿಮಠ ಅವರನ್ನು ಕರೆಯಿಸಿ ಅವರನ್ನೂ ತರಾಟೆ ತೆಗೆದುಕೊಂಡರು.
ಮುಧೋಳ ಮತಕ್ಷೇತ್ರದ ಮಾಲಾಪೂರ ಗ್ರಾಮದಲ್ಲಿ ನೇಕಾರರು ಜವಳಿ ಇಲಾಖೆಯಿಂದ ಸಿಗುವ ಸಾಲಕ್ಕೆ ಅರ್ಜಿ ಹಾಕಿದ್ದರು. ಈವರೆಗೂ ಸೌಲಭ್ಯ ನೀಡಿಲ್ಲ. ನೇಕಾರಿಕೆ ಉದ್ಯೋಗ ಮಾಡುತ್ತಿಲ್ಲ ಎಂಬ ವರದಿ ನೀಡಿ ಸಾಲ ಮಂಜೂರು ಮಾಡಿಲ್ಲ ಎಂಬ ಆರೋಪ ಕೇಳಿ ಡಿಸಿಎಂ ಕಾರಜೋಳ ಗರಂ ಆದರು. ಸಾಲಕ್ಕೆ ಬೇಡಿಕೆ ಇಟ್ಟಿರುವವರೆಲ್ಲರೂ ನೇಕಾರಿಕೆ ಮಾಡುತ್ತಿದ್ದಾರೆ. ಬೇಕಾದರೆ ಬನ್ನಿ ನಾನೇ ನಿಮ್ಮ ಜೊತೆ ಬಂದು ತೋರಿಸುತ್ತೇನೆ. 20 ಜನಕ್ಕೆ ₹55 ಲಕ್ಷ ಸಾಲ ಸಿಗಬೇಕು ಎಂದು ತಾಕೀತು ಮಾಡಿದರು.