ಬಾಗಲಕೋಟೆ: ಎಪಿಎಂಸಿ ಕಾಯ್ದೆಗೆ ಸುಗ್ರೀವಾಜ್ಞೆ ಜಾರಿಗೆ ತರುವುದನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ನಾಯಕರು, ಹಿಂದಿನ ಪ್ರಧಾನಮಂತ್ರಿ ಮನ್ಮೋಹನ್ ಸಿಂಗ್ ಅವರು ವಿಶ್ವ ವಾಣಿಜ್ಯ ಕೇಂದ್ರ (ಡಬ್ಲ್ಯೂಟಿಒ) ಒಪ್ಪಂದಕ್ಕೆ ಸಹಿ ಮಾಡಿರುವ ವರದಿಯನ್ನು ಓದಿರಿ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಸಲಹೆ ನೀಡಿದ್ದಾರೆ.
ಜಿಲ್ಲಾಡಳಿತ ಭವನದಲ್ಲಿ ಕೋವಿಡ್ - 19 ರೋಗದ ಬಗ್ಗೆ ಸಂಬಂಧಿತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಪಿಎಂಸಿ ಕಾಯ್ದೆ ವಿಚಾರವಾಗಿ ಕಾಂಗ್ರೆಸ್ ವಿನಾ ಕಾರಣ ಅಪಪ್ರಚಾರ ಮಾಡುತ್ತಿದೆ. ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಹಿಂದೆ ಪ್ರಧಾನಮಂತ್ರಿ ಮನ್ಮೋಹನ್ ಸಿಂಗ್ ಅಧಿಕಾರಿದಲ್ಲಿದ್ದಾಗ ಡಬ್ಲ್ಯುಟಿಒ ಜೊತೆ ಒಪ್ಪಂದ ಮಾಡಿಕೊಂಡಿರುವ ಕಾಯ್ದೆ ಮಾದರಿಯಲ್ಲಿಯೇ ಇದೆ. ಯಾವುದೇ ಬದಲಾವಣೆ ಮಾಡಿಲ್ಲ. ಈ ಕಾಯ್ದೆಯಿಂದ ರೈತರಿಗೆ ಅನುಕೂಲವಾಗುತ್ತದೆ. ಕಾಂಗ್ರೆಸ್ ಪಕ್ಷದ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ತಿಳಿಸಿದರು.
ಇನ್ನು ಜಿಲ್ಲೆಯಲ್ಲಿ ಕರೊನಾ ಹತೋಟಿಯಲ್ಲಿದ್ದು, ಮುಂಜಾಗ್ರತೆ ಹಿನ್ನೆಲೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗಿದೆ. ಬೇರೆ ರಾಜ್ಯದಿಂದ ಇನ್ನು 500 ಜನ ಕಾರ್ಮಿಕರು ಬರುತ್ತಾರೆ. ಅವರಿಗೆ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ. ಹೂರ ರಾಜ್ಯಗಳಿಂದ ಬೇರೆ ಪ್ರದೇಶಗಳಿಂದ ಬಂದಿರುವ ಕಾರ್ಮಿಕರಿಗೆ ಉದ್ಯೋಗ ಖಾತೆ ಯೋಜನೆಯಲ್ಲಿ ಕೂಲಿ ಕೆಲಸ ನೀಡಲಾಗುವುದು ಎಂದರು.