ಬಾಗಲಕೋಟೆ: ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಚುನಾವಣೆ, ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಚರ್ಚೆಗೆ ಗ್ರಾಸವಾಗಿ ಶಾಂತವಾಗಿರುವ ನಂತರ ಈಗ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ಬ್ಯಾಂಕಿನ ಚಿನ್ನ ಠೇವಣಿ ಹಾಗೂ ಸಾಲ ಮರುಪಾವತಿ ವಿಚಾರದಲ್ಲಿ ಭ್ರಷ್ಟಾಚಾರ ನಡೆದಿರುವ ಆರೋಪ ಸಹ ಕೇಳಿಬಂದಿದೆ.
ಡಿಸಿಸಿ ಬ್ಯಾಂಕಿನ ಕೆರೂರು ಪಟ್ಟಣದ ಶಾಖೆಯ ಹಿರಿಯ ವ್ಯವಸ್ಥಾಪಕ ಎಸ್.ಪಿ ಮೇಟಿ ವಿರುದ್ಧ ಅವ್ಯವಹಾರ ಆರೋಪ ಕೇಳಿ ಬಂದು ಅದು ಸಾಬೀತಾದರೂ ಅವರಿಗೆ ನೀಡಲಾದ ಶಿಕ್ಷೆಯ ಪ್ರಮಾಣ ಚರ್ಚೆಗೆ ಕಾರಣವಾಗಿದೆ.
ಶಾಖಾ ಲಾಕರ್ನಲ್ಲಿ 14 ಚೀಲಗಳು ವ್ಯತ್ಯಾಸ ಕಂಡುಬಂದಿದೆ. ಅವು ಲೆಕ್ಕಕ್ಕೆ ಸಿಗುತ್ತಿಲ್ಲ, 827 ಬ್ಯಾಗ್ಗಳು ಇರಬೇಕಾಗಿದ್ದ ಲಾಕರ್ನಲ್ಲಿ 14 ಬ್ಯಾಗ್ಗಳು ಕಡಿಮೆ ಆಗಿರುವುದಲ್ಲದೇ ವಿಜಯಲಕ್ಷ್ಮಿ ಎಂಬುವರ ಠೇವಣಿ ಮೇಲೆ ನೀಡಿರುವ ಸಾಲದ ಖಾತೆಯಲ್ಲಿ ಠೇವಣಿ ಅವಧಿ ಮುಕ್ತಾಯಗೊಂಡಿದ್ದರೂ ಸಾಲದ ಖಾತೆಗೆ ಜಮೆ ಆಗಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಇದರ ಜೊತೆಗೆ ಬಯೋಮೆಟ್ರಿಕ್ ಹಾಜರಾತಿಯಲ್ಲಿ ಬೇರೆ ಸಿಬ್ಬಂದಿಯಿಂದ ಹಾಜರಾತಿ ಹಾಕಿಸಿರುವುದು ಬೆಳಕಿಗೆ ಬಂದಿದೆ. ಇದು ವಿಶ್ವಾಸ ದ್ರೋಹ ಹಾಗೂ ಅವ್ಯವಹಾರವಾಗಿರುವುದರಿಂದ ಇಂತಹ ಅಪರಾಧಕ್ಕೆ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಾಖಾ ವ್ಯವಸ್ಥಾಪಕರಿಗೆ ಪತ್ರ ಬರೆದು, ಈ ಅಪರಾಧಕ್ಕೆ ಮೂರು ದಿನ ವೇತನ ರಹಿತ ರಜೆ, ಶಿಸ್ತು ಕ್ರಮ ಎಂದು 2 ಸಾವಿರ ರೂಪಾಯಿ ದಂಡ ವಿಧಿಸಿರುವುದು ಅಚ್ಚರಿ ಮೂಡಿಸಿದೆ.
ದೊಡ್ಡ ಪ್ರಮಾಣದ ವಂಚನೆ ಆರೋಪ ಕೇಳಿಬಂದಿದ್ದರೂ ನೆಪಮಾತ್ರಕ್ಕೆ ಶಿಕ್ಷೆ ವಿಧಿಸಿದ್ದಾರೆ ಎಂದು ಆರೋಪಿಸಲಾಗುತ್ತಿದ್ದು, ಆಡಳಿತ ಮಂಡಳಿಯ ನಡೆಯ ವಿರುದ್ಧ ಚರ್ಚೆ ಆರಂಭವಾಗಿದೆ.
ಇದನ್ನೂ ಓದಿ: ಬಾಗಲಕೋಟೆ: ಖತರ್ನಾಕ್ ಬೈಕ್ ಕಳ್ಳನ ಬಂಧನ