ಬಾಗಲಕೋಟೆ: ಸಾಮಾನ್ಯವಾಗಿ ಭಕ್ತರು ದೇವರಿಗೆ ಹೂ, ಹಣ್ಣು, ಸೀರೆ, ನೈವೇದ್ಯವನ್ನು ಸಮರ್ಪಿಸ್ತಾರೆ. ಆದ್ರೆ ಇಲ್ಲೊಂದು ಕಡೆ ಪೂಜಾರಿಗಳೇ ತಮ್ಮ ತಲೆಗೆ ತೆಂಗಿನ ಕಾಯಿಗಳನ್ನು ಒಡೆದುಕೊಳ್ಳುವ ಮೂಲಕ ಭಕ್ತಿಯನ್ನು ಸಮರ್ಪಿಸಲಾಗುತ್ತದೆ. ಹೌದು, ಇಂತಹ ಭಯಾನಕ ದೃಶ್ಯ ಕಂಡು ಬಂದದ್ದು ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದಲ್ಲಿನ ದಂಡಿನ ದುರ್ಗಾ ದೇವಿ ಜಾತ್ರೆಯಲ್ಲಿ. ಕಳೆದ 28 ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಈ ಜಾತ್ರೆಯಲ್ಲಿ ಎಲ್ಲರ ಗಮನ ಸೆಳೆಯುವುದು ಪೂಜಾರಿಗಳು ತಲೆಗೆ ತೆಂಗಿನಕಾಯಿ ಒಡೆದುಕೊಂಡು ದೇವರಿಗೆ ಭಕ್ತಿ ಸಮರ್ಪಿಸುವ ದೃಶ್ಯ.
ಈ ಬಾರಿಯೂ ಕೂಡ ದಂಡಿನ ದುರ್ಗಾದೇವಿ ದೇವಸ್ಥಾನದ ಪೂಜಾರಿಗಳಾದ ದಲ್ಲಪ್ಪ ಹಾಗೂ ನಾಗಪ್ಪ ಒಟ್ಟು 30ಕ್ಕೂ ಅಧಿಕ ತೆಂಗಿನಕಾಯಿಗಳನ್ನು ತಲೆಗೆ ಒಡೆದುಕೊಂಡು ಭಕ್ತಿಯ ಪರಾಕಾಷ್ಠೆ ಮೆರೆದಿದ್ದಾರೆ. ಪ್ರತಿ ವರ್ಷ ಪೂಜಾರಿಗಳು ತಲೆಗೆ ತೆಂಗಿನಕಾಯಿಗಳನ್ನು ಒಡೆದುಕೊಳ್ಳುವುದನ್ನು ನೋಡಲು ಜಿಲ್ಲೆ, ರಾಜ್ಯ, ಹೊರ ರಾಜ್ಯಗಳಿಂದ ಭಕ್ತರು ಆಗಮಿಸ್ತಾರೆ. ಹರಿಣಿಶಿಕಾರಿ ಸಮಾಜದ ಬಾಂಧವರ ಆರಾಧ್ಯ ದೈವವಾಗಿರುವ ದಂಡಿನ ದುರ್ಗಾ ದೇವಿ ಜಾತ್ರೆಯಲ್ಲಿ ಭಾಗಿಯಾಗಿ ಹರಕೆ ಹೊತ್ತರೆ ಬೇಡಿಕೆಗಳು ಈಡೇರುತ್ತವೆ ಎನ್ನುವ ನಂಬಿಕೆಯಿದೆ. ಹೀಗಾಗಿ ಜಾತ್ರೆಯ ಸಂದರ್ಭದಲ್ಲಿ ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.
ಇದನ್ನೂ ಓದಿ: ಸೇವಾ ನಿವೃತ್ತಿ ದಿನವೇ ಮಹಾರಾಷ್ಟ್ರ ಪರ ಘೋಷಣೆ.. ನಿವೃತ್ತನ ಮರಾಠಿ ಪ್ರೇಮಕ್ಕೆ ಕನ್ನಡಿಗರ ಆಕ್ರೋಶ
ಕೊರೊನಾ ಹಿನ್ನೆಲೆ ಕಳೆದೆರಡು ವರ್ಷ ಜಾತ್ರೆ ನಡೆದಿರಲಿಲ್ಲ. ಈ ಬಾರಿ ಕೊರೊನಾ ಪ್ರಕರಣಗಳು ಕಡಿಮೆ ಆದ ಹಿನ್ನೆಲೆ ಅದ್ಧೂರಿಯಾಗಿ ಜಾತ್ರೆ ಆಚರಣೆ ಮಾಡುತ್ತಿದ್ದಾರೆ. ಪಲಕ್ಕಿ ಉತ್ಸವದ ಅಂಗವಾಗಿ ಡಿಜೆ ಹಾಕಿ ಕುಣಿಯುವುದು, ಭಂಡಾರ ಎರಚುವುದು ಸೇರಿದಂತೆ ಇತರೆ ಪೂಜೆ ನೆರವೇರಿಸುತ್ತಾರೆ. ಪಲ್ಲಕ್ಕಿ ಉತ್ಸವದ ಮೆರವಣಿಗೆ ಬಳಿಕ ದೇವಿಗೆ ಐದು ಸುತ್ತು ಪ್ರದರ್ಶನ ಹಾಕಿದ ಬಳಿಕ ಎಲ್ಲರ ಸಮ್ಮುಖದಲ್ಲಿ ಪೂಜಾರಿಯು ತಲೆಗೆ ತೆಂಗಿನ ಕಾಯಿ ಒಡೆದುಕೊಂಡು ಭಕ್ತಿಯ ಪರಾಕಾಷ್ಠೆ ಮೆರೆಯುತ್ತಾರೆ. ಸೇರಿದ ಜನಸ್ತೋಮ ಉಧೋ ಉಧೋ ಎಂದು ಕೂಗಿ ದೇವಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ದೇವಿಯೇ ದೇಹದ ಒಳಗೆ ಪ್ರವೇಶ ಮಾಡಿ ಹೀಗೆಲ್ಲಾ ಮಾಡಿಸುತ್ತಾಳೆ ಎಂದು ಅರ್ಚಕರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಈ ಜಾತ್ರೆ ಐದು ದಿನ ನಡೆದ ಬಳಿಕ ಬಾಗಲಕೋಟೆ ನಗರದಲ್ಲಿರುವ ದುರ್ಗಾದೇವಿಯ ಜಾತ್ರೆ ನಡೆಯುತ್ತದೆ. ಇಲ್ಲಿಯೂ ಸಹ ಹರಿಣಿಶಿಕಾರಿ ಜನಾಂಗದವರು ಅದ್ದೂರಿಯಾಗಿ ಜಾತ್ರೆ ನಡೆಸುತ್ತಾರೆ. ಇಲ್ಲಿನ ಪೂಜಾರಿಯು ಸಹ ತಲೆಗೆ ತೆಂಗಿನಕಾಯಿ ಒಡೆದುಕೊಂಡು ಭಕ್ತಿ ಮೆರೆಯುತ್ತಾರೆ.