ಬಾಗಲಕೋಟೆ: ಜಿಲ್ಲಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರೂ ಜನತೆ ಭಯ ಪಡುವ ಅಗತ್ಯ ಇಲ್ಲ. ಎಲ್ಲಾ ತಾಲೂಕುಗಳಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ.ರಾಜೇಂದ್ರ ತಿಳಿಸಿದ್ದಾರೆ.
ಕೊರೊನಾ ಸೋಂಕು ಇರುವವರಿಗೆ ಕೆಮ್ಮು, ನೆಗಡಿ, ಜ್ವರ ಇದ್ದಲ್ಲಿ ಅಂತವರನ್ನು ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿ ಚಿಕಿತ್ಸೆ ನೀಡುವ ಕೆಲಸ ಮಾಡಲಾಗುತ್ತದೆ. ಯಾರಿಗೆ ಕೆಮ್ಮು, ನೆಗಡಿ, ಜ್ವರ ಇಲ್ಲದೆ ಇತರ ಲಕ್ಷಣಗಳು ಇದ್ದಲ್ಲಿ ತಾಲೂಕು ಕೇಂದ್ರದಲ್ಲಿ ಪರೀಕ್ಷೆ ಮಾಡಲಾಗುತ್ತದೆ. ಆಸ್ಪತ್ರೆಯಲ್ಲಿ 7 ದಿನ ಚಿಕಿತ್ಸೆ ನೀಡಿದ ಬಳಿಕ ನೆಗೆಟಿವ್ ಬಂದ ಮೇಲೆ ಮತ್ತೆ 7 ದಿನ ಹೋಮ್ ಕ್ವಾರಂಟೈನ್ನಲ್ಲಿ ಇರಿಸಲಾಗುತ್ತದೆ. ಆಕಸ್ಮಿಕವಾಗಿ ಪಾಸಿಟಿವ್ ಬಂದಲ್ಲಿ ಮತ್ತೆ ಚಿಕಿತ್ಸೆ ನೀಡಲಾಗುತ್ತದೆ.
ಇಲ್ಲಿಯವರೆಗೆ ಕೊರೊನಾದಿಂದ ಮೃತಪಟ್ಟಿರುವವರ ಸಂಖ್ಯೆ ಕಡಿಮೆ ಇದೆ. ತೀವ್ರ ತೊಂದರೆ ಉಂಟಾಗಿ ಆಸ್ಪತ್ರೆಗೆ ಬಂದ ಸಮಯದಲ್ಲಿ ಚಿಕಿತ್ಸೆ ನೀಡುವ ಮೊದಲೇ ಮೃತಪಟ್ಟಿರುವವರ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ಜನ ಭಯ ಪಡುವ ಅಗತ್ಯವಿಲ್ಲ. ಆದರೆ ಸರ್ಕಾರ ನೀಡಿರುವ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಿ, ಎಚ್ಚರದಿಂದ ಇರಬೇಕು ಎಂದು ಅವರು ಮನವಿ ಮಾಡಿದ್ದಾರೆ.