ಮುದ್ದೇಬಿಹಾಳ : ಯೂನಿಯನ್ ಬ್ಯಾಂಕ್ ಎಟಿಎಂ ದರೋಡೆ ಪ್ರಕರಣವನ್ನು ಭೇದಿಸಿರುವ ಮುದ್ದೇಬಿಹಾಳ ಪೊಲೀಸರು 7 ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೇ, ಬಂಧಿತರಿಂದ 13 ಲಕ್ಷ ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ.
ಮುದ್ದೇಬಿಹಾಳ ವಿದ್ಯಾನಗರದ ನಿವಾಸಿ ಮಂಜುನಾಥ ಸಿದ್ದಯ್ಯ ಬಿದ್ನಾಳಮಠ, ಗಂಗಾವತಿ ತಾಲೂಕಿನ ಮರಕುಂಟಿಯ ಬಸವರಾಜ ಪಂಪಾಪತಿ ಮೇಟಿ, ಸುರೇಶ ಯಂಕಪ್ಪ ದೇವರಹಿಪ್ಪರಗಿ, ಯಲ್ಲಪ್ಪ ದೇವರಹಿಪ್ಪರಗಿ, ನಾಗರಾಜ ಗುರಪ್ಪ ಗೌಂಡಿ, ಯೂನಿಯನ್ ಬ್ಯಾಂಕ್ ಸಿಪಾಯಿಯಾದ ಸಿಂಧಗಿ ತಾಲೂಕಿನ ಹೂವಿನಹಳ್ಳಿಯ ವಿಠ್ಠಲ ಲಕ್ಕಪ್ಪ ಮಂಗಳೂರ, ಬ್ಯಾಂಕ್ ಕ್ಯಾಶಿಯರ್ ಮಿಸ್ಮಿತಾ ಹುಸೇನಪ್ಪ ಶರಾಭಿ ಬಂಧಿತ ಆರೋಪಿಗಳು.
ಘಟನೆಯ ವಿವರ
ನ.21ರಂದು ಯೂನಿಯನ್ ಬ್ಯಾಂಕ್ ಎಟಿಎಂ ಕಳ್ಳತನ ಮಾಡಿದ ಪ್ರಕರಣ ದಾಖಲಾಗಿತ್ತು. ಪರಿಶೀಲನೆ ನಡೆಸಿದ ಪೊಲೀಸರಿಗೆ ಅಚ್ಚರಿ ಕಾದಿತ್ತು. ಎಟಿಎಂ ಕಳ್ಳತನ ಮಾಡಿದ್ದ ವೇಳೆ ಕಳ್ಳರು ಎಟಿಎಂ ಬಾಗಿಲ ಬೀಗ ಮುರಿದದ್ದು ಬಿಟ್ಟರೆ, ಬೇರೆ ಯಾವುದೇ ಅನಾಹುತ ಮಾಡದೇ ಎಟಿಎಂನಲ್ಲಿದ್ದ ಹಣವನ್ನು ಎಗರಿಸಿದ್ದರು. ಪೊಲೀಸರು ದರೋಡೆಯ ಹಿಂದೆ ಬ್ಯಾಂಕ್ ಸಿಬ್ಬಂದಿಯ ಕೈವಾಡ ಇರುವ ಅನುಮಾನದ ಮೇರೆಗೆ ತನಿಖೆ ನಡೆಸಿದಾಗ ದರೋಡೆಯ ಸ್ವರೂಪ ಬಯಲಾಗಿದೆ.
ದರೋಡೆಗೆ ಬ್ಯಾಂಕ್ ಕ್ಯಾಶಿಯರ್ ಸಹಾಯ
ತನಿಖೆ ವೇಳೆ ಬ್ಯಾಂಕ್ ಸಿಬ್ಬಂದಿಯನ್ನು ವಿಚಾರಣೆ ನಡೆಸಿದಾಗ ಬ್ಯಾಂಕ್ನ ಕ್ಯಾಶಿಯರ್ ಆಗಿದ್ದ ಮಿಶ್ಮಿತಾ ಶರಾಭಿ ಅವರ ಸಹಾಯದೊಂದಿಗೆ ಎಟಿಎಂ ಲೂಟಿ ಮಾಡಲಾಗಿದೆ ಎಂಬುದನ್ನು ಪತ್ತೆ ಮಾಡಲಾಗಿದೆ. ಆರೋಪಿ ಮಂಜುನಾಥ ಬಿದ್ನಾಳಮಠ ಕ್ಯಾಶಿಯರ್ ಮಿಶ್ಮಿತಾ ಶರಾಭಿ ಅವರ ಜೊತೆ ಸೇರಿ ಎಟಿಎಂ ಲೂಟಿಗೆ ಯೋಜನೆ ರೂಪಿಸಿದ್ದಾನೆ.
ಬಳಿಕ ಮಿಶ್ಮಿತಾ ಅವರಿಂದ ಎಟಿಎಂ ಪಾಸ್ವರ್ಡ್ ಪಡೆದುಕೊಂಡು, ಇನ್ನೊಬ್ಬ ಆರೋಪಿ ವಿಠ್ಠಲ ಮಂಗಳೂರು ಸಹಾಯದಿಂದ ನಕಲಿ ಕೀಯನ್ನು ಬಳಸಿ ಇನ್ನುಳಿದ ಆರೋಪಿಗಳೊಂದಿಗೆ ಕೂಡಿಕೊಂಡು ಯೂನಿಯನ್ ಬ್ಯಾಂಕ್ ಎಟಿಎಂ ಶಟರ್ ಕೀಯನ್ನು ಮುರಿದು ಕಳ್ಳತನ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿತರಿಂದ 13.18 ಲಕ್ಷ ರೂ. ನಗದು, ಎಟಿಎಂಗೆ ಹಣ ಹಾಕುವ ಕ್ಯಾಶೆಟ್‌ಗಳು, ಮಾರುತಿ ಸ್ವಿಫ್ಟ್ ಡಿಜೈರ್ ಕಾರು, 4 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ಭೇದಿಸಿದ ಬಸವನಬಾಗೇವಾಡಿ ಡಿಎಸ್ಪಿ ಅರುಣ್ಕುಮಾರ ಕೋಳೂರ, ಮುದ್ದೇಬಿಹಾಳ ಸಿಪಿಐ ಆನಂದ್ ವಾಘ್ಮೋಡೆ, ಪಿಎಸ್ಐ ರೇಣುಕಾ ಜಕನೂರ, ಪ್ರೊಬೇಷನರಿ ಪಿಎಸ್ಐ ದೀಪಾ ಮತ್ತು ಸ್ಥಳೀಯ ಠಾಣೆಯ ಕ್ರೈಂ ಮತ್ತು ಸಿವಿಲ್ ಪೊಲೀಸ್ ಸಿಬ್ಬಂದಿ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದಕುಮಾರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.