ಬಾಗಲಕೋಟೆ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಪರಿಸ್ಥಿತಿ ನೋಡಿದ್ರೆ ಅಯ್ಯೋ ಅನ್ನಿಸುತ್ತದೆ. ಒಂದು ತೂತು ಮುಚ್ಚಬೇಕಾದ್ರೆ ಇನ್ನೊಂದು ತೂತು ಓಪನ್ ಆಗಿರುತ್ತದೆ. ಈ ಸರ್ಕಾರ ಬಹಳ ದಿನ ಉಳಿಯುವುದಿಲ್ಲ ಎಂದು ಕಾಂಗ್ರೆಸ್ ಪಕ್ಷದ ಮುಖಂಡ ಸಿ.ಎಂ.ಇಬ್ರಾಹಿಂ ವ್ಯಂಗ್ಯವಾಡಿದ್ದಾರೆ.
ಬಾಗಲಕೋಟೆ ನಗರದ ಪ್ರೆಸ್ಕ್ಲಬ್ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಲಸಿಗರಿಗೆ ಸಚಿವ ಸ್ಥಾನ ನೀಡಿರುವುದರಿಂದ ಮೂಲ ಬಿಜೆಪಿಯವರು ಎದ್ದು ನಿಂತಿದ್ದಾರೆ. ಇದರಿಂದ ಒಂದು ತೂತು ಮುಚ್ಚುವಷ್ಟರಲ್ಲಿಯೇ ಇನ್ನೊಂದು ತೂತು ಬೀಳುವಂತಾಗಿದೆ. ಬಿ.ಎಸ್.ಯಡಿಯೂರಪ್ಪ ಪ್ಯಾಚ್ವರ್ಕ್ ಮಾಡುತ್ತಿದ್ದಾರೆ. ರಾಜ್ಯ ಹಾಗೂ ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿದ್ದು, ಮುಂದಿನ ದಿನಮಾನದಲ್ಲಿ ಚಿನ್ನಾಭರಣದ ಬೆಲೆ ಐವತ್ತು ಸಾವಿರಕ್ಕೆ ಏರಲಿದೆ ಎಂದರು.
ಅಟಲ್ ಬಿಹಾರಿ ವಾಜಪೇಯಿ ಹಾಗೂ ಆರ್ ಎಸ್ ಎಸ್ ಮುಖಂಡರಾದ ದೀನ್ ದಯಾಳ್ ಶರ್ಮಾ ಸೇರಿದಂತೆ ಇತರ ಮುಖಂಡರು ದೇಶದ ಬಗ್ಗೆ ಕಾಳಜಿ ಇಟ್ಟುಕೊಂಡಿದ್ದರು. ಆದ್ರೆ ನನ್ನಿಂದಲೇ ಎಲ್ಲಾ ನಡೆಯುವುದು ಎಂಬ ಸ್ವಾರ್ಥ ಹಾಗೂ ಸರ್ವಾಧಿಕಾರಿ ಧೋರಣೆಯನ್ನು ಪ್ರಧಾನ ಮಂತ್ರಿ ಮೋದಿ ಹೊಂದಿದ್ದಾರೆ. ಅವರ ಆರ್ಥಿಕ ನೀತಿ ವಿರೋಧಿಸಿ ಮುಂದಿನ ತಿಂಗಳಲ್ಲಿ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.