ಬಾಗಲಕೋಟೆ: ಜಿಲ್ಲೆಯ ಬನಹಟ್ಟಿ ನಗರದ ಜಮಖಂಡಿ - ಕುಡಚಿ ರಸ್ತೆಯ ವಾರ್ಡ್ ನಂ. 9ರ ಸರ್ಕಾರಿ ಜಾಗದಲ್ಲಿ ನಿರ್ಮಾಣಗೊಂಡಿದ್ದ 5 ಮಳಿಗೆಗಳನ್ನು ನಗರಸಭೆ ಪೌರಾಯುಕ್ತ ಶ್ರೀನಿವಾಸ ಜಾಧವ ನೇತೃತ್ವದಲ್ಲಿ ತೆರವುಗೊಳಿಸಲಾಯಿತು.
ವಾರ್ಡ್ ನಂ. 9ರಲ್ಲಿ ರುದ್ರಭೂಮಿ ಎದುರಿಗಿದ್ದ ಮಹಾದೇವ ದೇವಸ್ಥಾನಕ್ಕೆ ಸಂಬಂಧಿಸಿದ ಸರ್ಕಾರಿ ಜಾಗದಲ್ಲಿ 5 ಮಳಿಗೆಗಳು ನಿರ್ಮಾಣವಾಗಿದ್ದವು. ಹೀಗಾಗಿ ಇಂದು ಮಳಿಗೆ ತೆರವು ಕಾರ್ಯಾಚರಣೆ ನಡೆಸಲಾಯಿತು. ಈ ವೇಳೆ, ವ್ಯಾಪಾರಿಗಳು ಹಾಗೂ ಅವರ ವಕಾಲತ್ತು ವಹಿಸಿದ್ದ ನ್ಯಾಯವಾದಿ ಸುಜಾತಾ ನಿಡೋಣಿ ಅಡ್ಡಿಯುಂಟು ಮಾಡಿದ್ದು, ಅಧಿಕಾರಿಗಳು ಹಾಗೂ ವ್ಯಾಪಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು.
ನಮ್ಮ ಬಳಿ ಎಲ್ಲ ದಾಖಲಾತಿಗಳಿವೆ. ನಾವು ಪ್ರತಿ ವರ್ಷ ಕಂದಾಯ ಕಟ್ಟುತ್ತಿದ್ದೇವೆ ಎಂದು ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತ ಶ್ರೀನಿವಾಸ ಜಾಧವ, ಕಳೆದ 20 ದಿನಗಳ ಹಿಂದೆ ಬನಹಟ್ಟಿಯ ಕಿರಿಯ ಶ್ರೇಣಿ ನ್ಯಾಯಾಲಯದಲ್ಲಿ ಈ ಕುರಿತು ದಾಖಲಾಗಿದ್ದ ಪ್ರಕರಣದ ಅರ್ಜಿ ತಿರಸ್ಕಾರಗೊಂಡಿದೆ ಎಂದು ತಿಳಿಸಿದರು.
ಓದಿ: ಕೋಡಿಹಳ್ಳಿ ಇಲ್ಲೊಂದು-ಅಲ್ಲೊಂದು ಮಾತಾಡೋದು ಸರಿಯಲ್ಲ : ಸಚಿವ ಆರ್.ಅಶೋಕ್
ಅಕ್ರಮ ನಿವಾಸಿಗಳಿಗೂ ತಟ್ಟಿದ ಬಿಸಿ: ರಬಕವಿ - ಬನಹಟ್ಟಿ ನಗರಾದ್ಯಂತ ಹಲವಾರು ಜನರು ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದು, ನಗರಸಭೆ ಅಧಿಕಾರಿಗಳ ಈ ಕ್ರಮದಿಂದ ಅಕ್ರಮ ನಿವಾಸಿಗಳಿಗೂ ಬಿಸಿ ಮುಟ್ಟಿದೆ. ಮುಂದಿನ ದಿನಗಳಲ್ಲಿ ಸಕಲ ರೀತಿಯ ತನಿಖೆಯ ಮೂಲಕ ಅಂತಹ ಅಕ್ರಮದಾರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು. ಸಾರ್ವಜನಿಕರು ದೂರು ನೀಡಿದ್ದರಿಂದ ಸರ್ಕಾರಿ ಜಾಗವನ್ನು ತೆರವುಗೊಳಿಸಿದ್ದೇವೆ ಎಂದರು.