ಬಾಗಲಕೋಟೆ: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಅವರು ಜಿಲ್ಲೆಯ ಬಾದಾಮಿ, ಮುಧೋಳ ಹಾಗೂ ಜಮಖಂಡಿ ತಾಲೂಕುಗಳ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಇಂದು ಪರಿಶೀಲನೆ ನಡೆಸಿ ಶೀಘ್ರದಲ್ಲೇ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.
ಬಾದಾಮಿಯ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಪ್ರವಾಹ ಬಾಧಿತ ಪ್ರದೇಶಗಳ ಛಾಯಾಚಿತ್ರ ಪ್ರದರ್ಶನವನ್ನು ವಿಕ್ಷಿಸಿದರು. ನಂತರ ಗೋವನಕಿ ಗ್ರಾಮಕ್ಕೆ ತೆರಳಿ ನದಿ ಪಾತ್ರದಲ್ಲಿರುವ ಮರಳು, ನಂದಿಕೇಶ್ವರ ಗ್ರಾಮದ ಆಶ್ರಯ ಮನೆಗಳಿಗೆ ನೀಡಿರುವ ಸೌಲಭ್ಯ, ಜಾಲಿಹಾಳ ಗ್ರಾಮದಲ್ಲಿ ಸೂರ್ಯಕಾಂತಿ ಬೆಳೆ ಹಾನಿ ವೀಕ್ಷಿಸಿದರು. ಬಳಿಕ ಪಟ್ಟದಕಲ್ಲು ಹಾಗೂ ಐಹೊಳೆ ಗ್ರಾಮಗಳಲ್ಲಿ ಉಂಟಾದ ಮನೆ ಹಾಗೂ ರಸ್ತೆ ಹಾನಿಯನ್ನು ಪರಿಶೀಲಿಸಿದರು.
ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದಲ್ಲಿ ದಾಳಿಂಬೆ ಬೆಳೆ ಹಾನಿ, ಮುಧೋಳ ತಾಲೂಕಿನ ಚಚಿಖಂಡಿ ಮತ್ತು ಯಾದವಾಡ ಸೇತುವೆ ಪರಿಶೀಲನೆ, ಜಮಖಂಡಿಯ ಅಸ್ಕಿ ಗ್ರಾಮದ ಪರಿಹಾರ ಕೇಂದ್ರದಲ್ಲಿ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದರು. ನಮ್ಮನ್ನು ಇಲ್ಲಿಂದ ಬೇರೆಡೆ ಸ್ಥಳಾಂತರಿಸಿ ಎಂದು ಸಂತ್ರಸ್ತರು ಮನವಿ ಮಾಡಿಕೊಂಡರು. ಈ ಕುರಿತು ಅಧಿಕಾರಿಗಳ ಜೊತೆ ಚರ್ಚಿಸುತ್ತೇನೆ ಎಂದು ವಿಜಯ್ ಭಾಸ್ಕರ್ ಹೇಳಿದರು. ಈ ವೇಳೆ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಇದ್ದರು.