ಹುಬ್ಬಳ್ಳಿ/ಬಾಗಲಕೋಟೆ: ಸರಳವಾಸ್ತು ಸಂಸ್ಥಾಪಕ ಹಾಗೂ ರಾಜ್ಯದ ಪ್ರಸಿದ್ಧ ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಭೀಕರವಾಗಿ ಹತ್ಯೆಯಾಗಿದ್ದು, ಅವರ ಕುಟುಂಬಸ್ಥರು ಹಾಗೂ ಅವರ ಆಭಿಮಾನಿ ಸಮೂಹ ದುಃಖದಲ್ಲಿದೆ.
ಗುರೂಜಿ ಅವರ ಹುಟ್ಟೂರು ಬಾಗಲಕೋಟೆ. ಹಳೇ ಬಾಗಲಕೋಟೆ ಪಟ್ಟಣದ ಹುಂಡೇಕಾರ ಗಲ್ಲಿಯಲ್ಲಿ ಗುರೂಜಿಯ ತಂದೆ-ತಾಯಿ ವಾಸವಾಗಿದ್ದರು. ಮೂವರು ಸಹೋದರರು, ಮೂವರು ಸಹೋದರಿಯರು ಇದ್ದಾರೆ. ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಹಿತ ಬಿಇ ಸಿವಿಲ್ ಪದವಿಯನ್ನು ಬಾಗಲಕೋಟೆಯಲ್ಲಿ ಮುಗಿಸಿದ್ದ ಗುರೂಜಿ 1988ರಲ್ಲಿ ಮುಂಬೈಗೆ ತೆರಳಿದ್ದರು. ಅಲ್ಲಿ ಗುತ್ತಿಗೆದಾರನಾಗಿ ಕೆಲಸ ಮಾಡಿ ನಂತರ ಸಿಂಗಾಪೂರಕ್ಕೆ ಪ್ರಯಾಣ ಬೆಳೆಸಿ ವಾಸ್ತು ಶಾಸ್ತ್ರ ಅಧ್ಯಯನ ಮಾಡಿದ್ರು.
ಮುಂಬೈಯಲ್ಲಿ ಮೊದಲು ಸರಳವಾಸ್ತು ಕಚೇರಿ ಆರಂಭಿಸಿ, ಬಳಿಕ ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಸರಳವಾಸ್ತು ಕಚೇರಿ ಪ್ರಾರಂಭಿಸಿದರು. ನಂತರ ವಿವಿಧ ಶಾಖೆಗಳನ್ನು ತೆರೆದಿದ್ರು. ಬಾಗಲಕೋಟೆಯ ಒಂದು ಮನೆಗೆ ಬೀಗ ಹಾಕಿ, ಮತ್ತೊಂದು ಮನೆಯನ್ನು ಬಾಡಿಗೆ ನೀಡಿದ್ದರು. ತಮ್ಮ ಪೋಷಕರ ಜೊತೆ ಇಡೀ ಕುಟುಂಬವನ್ನೇ ಹುಬ್ಬಳ್ಳಿಗೆ ಶಿಫ್ಟ್ ಮಾಡಿದ್ದರು.
ಚಂದ್ರಶೇಖರ ಗುರೂಜಿ ಬಾಗಲಕೋಟೆಗೆ ಭೇಟಿ ನೀಡುವಾಗ ಕಾಲೋನಿಯಲ್ಲಿ ಎಲ್ಲರೊಂದಿಗೆ ಚೆನ್ನಾಗಿ ಬೆರೆತು ಅವರ ಕಷ್ಟಸುಖ ಕೇಳುತ್ತಿದ್ದರು. ಕೊರೊನಾ ಸಮಯದಲ್ಲಿ ಜಿಲ್ಲಾಡಳಿತದ ಮೂಲಕ ಧನಸಹಾಯವನ್ನೂ ಸಹ ಮಾಡಿದ್ದರಂತೆ. ಆಹಾರದ ಕಿಟ್ಗಳನ್ನು ಹಂಚಿ ಮಾನವೀಯತೆ ಮೆರೆದಿದ್ದರು. ದೇಗುಲದ ಮೂರ್ತಿಗೆ ಬೆಳ್ಳಿ ಕವಚವನ್ನು ನೀಡಿದ್ದರು.
ಇದನ್ನೂ ಓದಿ: ಗುರೂಜಿ ಒಳ್ಳೆಯವರಿದ್ದರು, ನನ್ನ ಗಂಡ ಕೊಲೆ ಮಾಡಿದ್ದೇಕೊ? ವನಜಾಕ್ಷಿ ಶಿರೂರ ಮಾತು
ಇದೀಗ ಸರಳ ವ್ಯಕ್ತಿ ಚಂದ್ರಶೇಖರ ಗುರೂಜಿ ಅವರ ಕೊಲೆಯಾಗಿದ್ದು ಆಪ್ತರು ಕಣ್ಣೀರಿಡುತ್ತಿದ್ದಾರೆ. ಕೊಲೆಗಡುಕರಿಗೆ ಉಗ್ರ ಶಿಕ್ಷೆಯಾಗಲಿ ಎಂದು ಒತ್ತಾಯಿಸಿದ್ದಾರೆ. ಇನ್ನೂ ಹುಬ್ಬಳ್ಳಿಯ ಸುಳ್ಳ ರಸ್ತೆಯಲ್ಲಿರುವ ಗುರೂಜಿ ಅವರ ಜಮೀನಿನಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.