ಬಾಗಲಕೋಟೆ: ಸಮಾಜ, ಸಂಸಾರದಲ್ಲಿ ತಾಯಂದಿರ ಪಾತ್ರ ದೊಡ್ಡದಿದೆ. ಮಕ್ಕಳು ಹಾದಿ ತಪ್ಪದಂತೆ ನೋಡಿಕೊಂಡಲ್ಲಿ ಸುಂದರ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಮನ್ನಿಕಟ್ಟಿ ಸಿದ್ಧಲಿಂಗ ವಿರಕ್ತಮಠದ ಶಿವಕುಮಾರ ಸ್ವಾಮೀಜಿ ಹೇಳಿದರು.
ಬಾಗಲಕೋಟೆ ನಗರದ ವಿದ್ಯಾಗಿರಿ ಅಥಣಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ನಗರ ಘಟಕದಿಂದ ಎಸ್ಸೆಸ್ಸೆಲ್ಸಿ, ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಉತ್ತಮ ಹಾದಿಯಲ್ಲಿ ಬೆಳೆಯಬೇಕಾದರೆ ಶ್ರದ್ಧೆ, ಸತ್ಯತೆಯಿಂದ ವ್ಯವಹರಿಸುವ ಭಾವನೆ ನಮ್ಮಲ್ಲಿ ಇರಬೇಕು. ನಮ್ಮ ಬಣಜಿಗ ಸಮಾಜವನ್ನು ನಾವೇ ತುಳಿಯುತ್ತಿದ್ದೇವೆ. ಅದಕ್ಕೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದೇವೆ. ಎಲ್ಲರು ಒಗ್ಗಟ್ಟಾಗಿ ಕೈ ಜೋಡಿಸದಾಗ ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಬಲಗೊಳ್ಳಲು ಸಾಧ್ಯ. ಬಸವಣ್ಣನವರು ಪೂಜಿಸುವ ಲಿಂಗ, ವಿಭೂತಿ ಹಚ್ಚಿಕೊಳ್ಳದ್ದಿದ್ದರೆ ಹೇಗೆ ಬಣಜಿಗ ಸಮಾಜದವರಾಗುತ್ತಾರೆ ಎಂದು ಪ್ರಶ್ನಿಸಿದರು.
ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನಿಸಿದರೇ ಸಾಲದು, ಪರೀಕ್ಷೆಯಲ್ಲಿ ಫೇಲಾಗಿ, ಅಡ್ಡದಾರಿ ಹಿಡಿದ ಮಕ್ಕಳನ್ನು ಕರೆ ತಂದು ಅರಿವು ಮೂಡಿಸಬೇಕು. ಬಡ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಬೇಕು. ಶಿಕ್ಷಣ ನೀಡುವಾಗ ಸಮಾಜದಿಂದ ತಾರತಮ್ಯ ಆಗಬಾರದು ಎಂದು ಸಲಹೆ ನೀಡಿದರು.