ಬಾಗಲಕೋಟೆ : ಜಿಲ್ಲೆಯ ಮುಧೋಳ ತಾಲೂಕಿನ ಮೆಟಗುಡ್ಡ ಗ್ರಾಮ ಬಳಿ ಇರುವ ಜೆ ಕೆ ಸಿಮೆಂಟ್ ಕಾರ್ಖಾನೆಯಿಂದ ಸ್ಥಳೀಯರಿಗೆ ಹಾಗೂ ರೈತರಿಗೆ ಸಾಕಷ್ಟು ತೊಂದರೆ ಉಂಟಾಗುತ್ತಿದೆ ಎಂದು ಆರೋಪಿಸಲಾಗಿದೆ.
ಮೆಟಗುಡ್ಡ, ನಿಂಗಾಪೂರ ಹಾಗೂ ಹಲಕಿ ಗ್ರಾಮದ ಜಮೀನುಗಳಿಗೆ ತೊಂದರೆ ಉಂಟಾಗುತ್ತಿದೆ. ಸಿಮೆಂಟ್ ಕಾರ್ಖಾನೆಯವರು ಅಕ್ರಮವಾಗಿ ಗಣಿಗಾರಿಕೆ ಮಾಡುತ್ತಿದ್ದಾರೆ. ಇದರಿಂದಾಗಿ ಬೆಳೆಗಳಿಗೆ ಹಾನಿ ಉಂಟಾಗುತ್ತಿದೆ. ಇದರ ಜತೆಗೆ ಮನೆಗಳು ಸಹ ಬಿರುಕುಗೊಂಡು ಸ್ಥಳೀಯರು ಆತಂಕ ಪಡುವಂತಾಗಿದೆ.
ಕಾರ್ಖಾನೆ ಆಡಳಿತ ಮಂಡಳಿಯವರು ಸ್ಥಳೀಯ ಯುವಕರಿಗೆ ಉದ್ಯೋಗ ನೀಡುವುದಾಗಿ ಜಮೀನು ಪಡೆದಿದ್ದಾರೆ. ಆದರೆ, ಸ್ಥಳೀಯರಿಗೆ, ಕನ್ನಡಿಗರಿಗೆ ಉದ್ಯೋಗ ನೀಡದೆ, ಬೇರೆಯವರಿಗೆ ಉದ್ಯೋಗ ನೀಡುತ್ತಿದ್ದಾರೆ.
ಅಲ್ಲದೇ ಅಧಿಕೃತವಾಗಿ ಗಣಿಗಾರಿಕೆ ಮಾಡಿದ್ದರೆ ಅದರಿಂದ ಬರುವ ಲಾಭವನ್ನು ಗ್ರಾಮಗಳ ಅಭಿವೃದ್ಧಿಗೆ ನೀಡಬೇಕು. ಇದನ್ನು ಸಹ ಪಾಲನೆ ಮಾಡುತ್ತಿಲ್ಲ ಎಂದು ರೈತ ಮುಖಂಡರು ಆರೋಪಿಸಿದ್ದಾರೆ.
ಇದನ್ನೂ ಓದಿ: ಶೈಕ್ಷಣಿಕ ವರ್ಷ ಆರಂಭದ ಬಳಿಕವೇ ಖಾಸಗಿ ಶಿಕ್ಷಣ ಸಂಸ್ಥೆಗಳ ಬೋಧಕ ಹುದ್ದೆಗಳಿಗೆ ನೇಮಕ : ಬಿಎಸ್ವೈ
ಹೀಗಾಗಿ ಜೆ ಕೆ ಸಿಮೆಂಟ್ ಕಾರ್ಖಾನೆಯಿಂದ ಸ್ಥಳೀಯರಿಗೆ ಅನುಕೂಲವಾಗುವುದರ ಬದಲು ತೊಂದರೆಯೇ ಹೆಚ್ಚಾಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳದೆ ಇದ್ದಲ್ಲಿ ರೈತರು ಸೇರಿ ಉಗ್ರ ಸ್ವರೂಪದ ಹೋರಾಟ ಮಾಡುವುದು ಅನಿವಾರ್ಯವಾಗಲಿದೆ ಎಂದು ರೈತ ಮುಖಂಡ ಯಲ್ಲಪ್ಪ ಹೆಗೆಡೆ ಎಚ್ಚರಿಸಿದ್ದಾರೆ.