ಬಾಗಲಕೋಟೆ: ಕ್ವಾರಂಟೈನ್ನಲ್ಲಿ ಇದ್ದ ವ್ಯಕ್ತಿಯೊಬ್ಬ ಸುಮ್ಮನೆ ಸಮಯ ಕಳೆಯುವ ಬದಲು ಗಣೇಶ ಮೂರ್ತಿ ಕೆತ್ತನೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಲೋಕಾಪೂರ ನಿವಾಸಿ ಮಲ್ಲಪ್ಪ ನಿಂಗಪ್ಪ ಬಡಿಗೇರ ಎಂಬುವವರು ಕಲಾವಿದರಾಗಿದ್ದು, ಹಲವು ವರ್ಷಗಳಿಂದ ತಮ್ಮ ವೃತ್ತಿಯನ್ನು ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಪತ್ನಿಯು ಹೆರಿಗೆಗೆ ಎಂದು ತವರು ಮನೆ ಮಹಾರಾಷ್ಟ್ರದ ಇಚಲಕಂಜಿಗೆ ಹೋಗಿದ್ದರು.
ಮೇ 16 ರಂದು ಪತ್ನಿ ಕರೆದುಕೊಂಡು ಬಂದ ಸಮಯದಲ್ಲಿ ಅಧಿಕಾರಿಗಳು ಕುಟುಂಬ ಸಮೇತ ಲೋಕಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ಗೆ ಒಳಪಡಿಸಿದ್ದರು. ಈ ಸಮಯದಲ್ಲಿ ಅಧಿಕಾರಿಗಳು ಮಲ್ಲಪ್ಪ ಬಡಿಗೇರ ಅವರ ಉದ್ಯೋಗದ ಬಗ್ಗೆ ಮಾಹಿತಿ ತಿಳಿದುಕೊಂಡು ಅವರಿಗೆ ಟಾಸ್ಕ್ ನೀಡಿದ್ದರು.
ಅಧಿಕಾರಿಗಳು ನೀಡಿದ್ದ ಟಾಸ್ಕ್ ಸ್ವೀಕರಿಸಿದ್ದ ಬಡಿಗೇರ 14 ದಿನದಲ್ಲಿ ಗಣೇಶನ ವಿಗ್ರಹ ಕೆತ್ತೆನೆ ಮಾಡಿದ್ದಾರೆ. ಮುಂದೆ ಮನೆಯಲ್ಲಿ ಆರು ದಿನಗಳ ಕಾಲ ಅಂತಿಮ ಟಚ್ ನೀಡಿ ವಿಗ್ರಹವನ್ನು ಅಧಿಕಾರಿಗಳಿಗೆ ನೀಡಿದ್ದಾರೆ. ಲೋಕಾಪುರ ಪಿಡಿಒ ಸುಭಾಶ ಗೋಲಶೆಟ್ಟಿ ಕಲಾವಿದ ಮಲ್ಲಪ್ಪ ಬಡಿಗೇರರಿಗೆ ಹತ್ತು ಸಾವಿರ ರೂ ಚೆಕ್ ನೀಡಿ ಮೂರ್ತಿ ಖರೀದಿಸಿದ್ದಾರೆ. ಈ ಕಾರ್ಯದಿಂದ ಸಿಇಒ ಗಂಗೂಬಾಯಿ ಮಾನಕರ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.