ಬಾಗಲಕೋಟೆ: ಐಹೊಳೆ ಪ್ರಾಚೀನ ಸ್ಮಾರಕಗಳಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ವಾಸವಿರುವ 124 ಕುಟುಂಬಗಳನ್ನು ಸ್ಥಳಾಂತರಿಸಿ ಸ್ಮಾರಕಗಳನ್ನು ಸಂರಕ್ಷಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ. ಸ್ಮಾರಕ ದರ್ಶನ ಮತ್ತು ಸಂರಕ್ಷಣೆಗಾಗಿ ಪ್ರವಾಸ ಕೈಗೊಂಡಿರುವ ಪಾಟೀಲ್ ಸೋಮವಾರ ಐಹೊಳೆಗೆ ಭೇಟಿ ನೀಡಿ ಸ್ಮಾರಕಗಳ ವಾಸ್ತವ ಸ್ಥಿತಿಗತಿ ಗಮನಿಸಿದರು.
ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಐಹೊಳೆ ಪ್ರವಾಸಿ ತಾಣಕ್ಕೆ ಬಂದಾಗ ಅಭಿಮಾನ, ನೋವು ಮಿಶ್ರಿತ ಭಾವ ಬರುತ್ತಿದೆ. ದೇವಾಲಯಗಳ ನಗರಿ ಎನ್ನುವ ಖ್ಯಾತಿ ಪಡೆದ ಐಹೊಳೆಯ ಸ್ಮಾರಕ ಸ್ಥಳದಲ್ಲಿ ಕೆಲವರು ಮನೆಗಳನ್ನು ಮಾಡಿಕೊಂಡು, ದನ, ಕುರಿಗಳನ್ನು ಕಟ್ಟಿ, ಕೃಷಿ ಚಟುವಟಿಕೆಗಳ ಸಾಮಗ್ರಿಗಳ ಸಂಗ್ರಹ ಮಾಡಿಕೊಂಡಿದ್ದಾರೆ. ಇದರಿಂದಾಗಿ ಈ ಸ್ಮಾರಕಗಳಿಗೆ ಪ್ರವಾಸಿಗರು, ಇತಿಹಾಸಕಾರರು ಭೇಟಿ ನೀಡಲು ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಮಾರಕಗಳಿಗೆ ಹೊಂದಿಕೊಂಡ 124 ಮನೆಗಳನ್ನು ಮೊದಲ ಹಂತವಾಗಿ ಸ್ಥಳಾಂತರ ಮಾಡಲು ಕ್ರಮ ಕೈಗೊಂಡು, ಜನವರಿ 30ರ ಒಳಗಾಗಿ ಕಾಮಗಾರಿ ಪೂರ್ಣಗೊಳಿಸಲಾಗುವುದು. ಐಹೊಳೆ ಗ್ರಾಮ ಸಂಪೂರ್ಣ ಸ್ಥಳಾಂತರ ಕುರಿತ ಪ್ರಸ್ತಾವನೆ ಈಗಾಗಲೇ ಸರಕಾರದ ಬಳಿ ಇದ್ದು, ಚರ್ಚಿಸಿ ಹೆಚ್ಚುವರಿ ಭೂಮಿ ಖರೀದಿಗೆ ಕಂದಾಯ ಇಲಾಖೆಯೊಂದಿಗೆ ಡಿಸೆಂಬರ್ 15 ರೊಳಗಾಗಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸ್ವಾತಂತ್ರ್ಯ ಸಿಕ್ಕು 75 ವರ್ಷವಾದರೂ ಪ್ರಾಚೀನ ದೇವಾಲಯಗಳನ್ನು ಸಂರಕ್ಷಣೆ, ವ್ಯವಸ್ಥಿತಗೊಳಿಸುವಲ್ಲಿ ಪೂರ್ಣಪ್ರಮಾಣದಲ್ಲಿ ಸಾಧ್ಯವಾಗಿಲ್ಲ. ಭಾರತೀಯ ಪುರಾತತ್ವ ಇಲಾಖೆಯಿಂದ ಅರ್ಧದಷ್ಟು ಸ್ಮಾರಕಗಳ ಸಂರಕ್ಷಣೆಗೆ ತೆಗೆದುಕೊಂಡಿದ್ದು, ರಾಜ್ಯಕ್ಕೆ ಸಂಬಂಧಿಸಿದ 61 ಸ್ಮಾರಕಗಳ ಪೈಕಿ ಈಗಾಗಲೇ ಒಂದಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. ಉಳಿದ 60 ಸ್ಮಾರಕ ಸಂರಕ್ಷಣೆಗೆ ಡಿಸೆಂಬರ್ 30ರೊಳಗಾಗಿ ಅಧಿಸೂಚನೆ ಹೊರಡಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಚಾಲುಕ್ಯ ಸ್ಮಾರಕ ಪ್ರಾಧಿಕಾರಕ್ಕೆ ₹2 ಕೋಟಿ ಅನುದಾನ: ಚಾಲುಕ್ಯ ಸ್ಮಾರಕ ಅಭಿವೃದ್ಧಿ ಪ್ರಾಧಿಕಾರದಿಂದ ಅಗತ್ಯ, ಅನಿವಾರ್ಯತೆಯಿಂದ ಕೆಲಸವಾಗಬೇಕಾಗಿತ್ತು, ಆದರೆ ಆಗಿಲ್ಲ. ಇದು ದುರ್ದೈವ ಎಂದು ಬೇಸರ ವ್ಯಕ್ತಪಡಿಸಿದರು. ಬಾಗಲಕೋಟೆ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ್ ಅವರನ್ನು ಕೂಡಲೇ ಆಯುಕ್ತರನ್ನಾಗಿಸಿ ಆದೇಶ ಹೊರಡಿಸಲು ಪ್ರವಾಸೋದ್ಯಮ ಇಲಾಖೆ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ. ಪ್ರವಾಸಿ ತಾಣಗಳಲ್ಲಿ ರಸ್ತೆ, ಚರಂಡಿ ದುರಸ್ಥಿ ಹೀಗೆ ಮೂಲಭೂತ ಸೌಲಭ್ಯಗಳ ನಿರ್ಮಾಣಕ್ಕೆ ಪ್ರವಾಸೋದ್ಯಮ ಇಲಾಖೆಯಿಂದ ಪ್ರಾಧಿಕಾರಕ್ಕೆ 2 ಕೋಟಿ ರೂಗಳನ್ನು ನೀಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.
ಸ್ಮಾರಕಗಳ ಸಂರಕ್ಷಣೆಗೆ ದತ್ತು ಯೋಜನೆ: ಕರ್ನಾಟಕದ ಕಲೆ, ಪರಂಪರೆಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ನಮ್ಮ ಸ್ಮಾರಕ ದರ್ಶನ ಮತ್ತು ಸಂರಕ್ಷಣೆಗಾಗಿ ಪ್ರವಾಸ ಕಾರ್ಯಕ್ರಮದ ಮೂಲಕ ಬೀದರ್ ಜಿಲ್ಲೆಯಿಂದ ರಾಜ್ಯದ ಪ್ರವಾಸವನ್ನು ಪ್ರಾರಂಭಿಸಲಾಗಿದೆ. ರಾಜ್ಯಾದ್ಯಂತ 280 ಸಂರಕ್ಷಿತ ಸ್ಮಾರಕಗಳನ್ನು ದತ್ತು ಯೋಜನೆಗೆ ಒಳಪಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸ್ಮಾರಕಗಳನ್ನು ದತ್ತು ಯೋಜನೆಗೆ ನೀಡಲಾಗುತ್ತಿದೆ. ಐಹೊಳೆಯಲ್ಲಿರುವ ಕೆಲವೊಂದು ಸ್ಮಾರಕಗಳ ಸಂರಕ್ಷಣೆಗೆ ದತ್ತು ಪಡೆಯಲು ಆಸಕ್ತರು ಮುಂದೆ ಬಂದಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: ಬೆಳ್ತಂಗಡಿ: ಸಿಎಂ ವಿರುದ್ಧ ಅವಹೇಳನಕಾರಿ ಆಡಿಯೋ; ಬಿಜೆಪಿ ಕಾರ್ಯಕರ್ತನ ವಿರುದ್ಧ ಪ್ರಕರಣ