ಬಾಗಲಕೋಟೆ: ರೆಡ್ ಜೋನ್ನಲ್ಲಿದ್ದ ಬಾಗಲಕೋಟೆಯಲ್ಲಿ ಕೊರೊನಾ ವೈರಸ್ ಸೋಂಕಿತ ನಾಲ್ವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಗುಣಮುಖರಾದ ಹಿನ್ನೆಲೆ, ಓರ್ವ ಮಹಿಳೆ, ಇಬ್ಬರು ಮಕ್ಕಳು ಹಾಗೂ ಓರ್ವ ಪುರುಷನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಗಂಗೂಬಾಯಿ ಮಾನಕರ್, ಜಿಲ್ಲಾ ಸರ್ಜನ್ ಡಾ.ಪ್ರಕಾಶ ಬಿರಾದಾರ, ಡಾ.ಜವಳಿ ಹಾಗೂ ಸಿಬ್ಬಂದಿ ಸೇರಿಕೊಂಡು ಚಪ್ಪಾಳೆ ತಟ್ಟಿ ಹೂವಿನ ಸಸಿಯನ್ನು ನೀಡಿ ಬೀಳ್ಕೊಟ್ಟರು. ಗುಣಮುಖರಾಗಿರುವುದಕ್ಕೆ ಮನೆಯಲ್ಲಿ ಈ ಸಸಿಯನ್ನು ನೆಟ್ಟು ಪೋಷಿಸುವಂತೆ ಡಾ.ಪ್ರಕಾಶ ಬಿರದಾರ ತಿಳಿಸಿದರು. ಇದೇ ಸಮಯದಲ್ಲಿ ನಾಲ್ಕು ವರ್ಷದ ಪುಟ್ಟ ಮಗುವಿಗೆ ಗಿಫ್ಟ್ ನೀಡಿದರು. ಈ ಸಂದರ್ಭದಲ್ಲಿ ಗುಣಮುಖರಾದವರು ತಮ್ಮ ಅಭಿಪ್ರಾಯ ತಿಳಿಸಿ, ವೈದ್ಯರು ಹಾಗೂ ಸಿಬ್ಬಂದಿ ಸರಿಯಾಗಿ ನೋಡಿಕೊಂಡಿದ್ದಾರೆ.
ಬೆಚ್ಚಗಿನ ನೀರು, ಲಿಂಬೆ ಹಣ್ಣು, ಊಟ ಉಪಾಹಾರ ನೀಡಿ ಚೆನ್ನಾಗಿ ನೋಡಿಕೊಂಡಿದ್ದಾರೆ ಎಂದು ಸಂತಸ ಹಂಚಿಕೊಂಡಿದ್ದಾರೆ. 33 ವರ್ಷದ ಪುರುಷ ಪಿ-164, 26 ವರ್ಷದ ಮಹಿಳೆ ಪಿ-165, 4 ವರ್ಷದ ಬಾಲಕ ಪಿ-186, 13 ವರ್ಷದ ಬಾಲಕ ಪಿ-187 ಅವರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಸಂಜೆ ಬಿಡುಗಡೆ ಮಾಡಲಾಯಿತು. ಇಲ್ಲಿಯವರೆಗೆ ಒಟ್ಟು 6 ಜನ ಕೋವಿಡ್ನಿಂದ ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಸಂತಸ ಮೂಡಿಸಿದೆ.
ಜಿಲ್ಲೆಯಲ್ಲಿ ಮತ್ತೆ 33 ಸ್ಯಾಂಪಲ್ಗಳ ವರದಿ ನೆಗಟಿವ್ ಬಂದಿದೆ. ಬಾಕಿ 27 ಮತ್ತು 100 ಹೊಸ ಸ್ಯಾಂಪಲ್ಗಳು ಸೇರಿ ಒಟ್ಟು 127 ಸ್ಯಾಂಪಲ್ಗಳ ವರದಿ ನಿರೀಕ್ಷೆಯಲ್ಲಿ ಇವೆ. ಮನೆಯಲ್ಲಿ ಪ್ರತ್ಯೇಕವಾಗಿ 1,545 ಜನರ ಮೇಲೆ ನಿಗಾ ಇಡಲಾಗಿದೆ.
ಇಲ್ಲಿಯವರೆಗೆ ಕಳುಹಿಸಲಾದ ಒಟ್ಟು ಸ್ಯಾಂಪಲ್ 1,713 ಇದ್ದು, ನೆಗಟಿವ್ ಪ್ರಕರಣ 1,556, ಪಾಸಿಟಿವ್ ಪ್ರಕರಣ 24, ಜಿಲ್ಲೆಯಲ್ಲಿ ಕೋವಿಡ್ನಿಂದ ಒಂದು ಸಾವಾಗಿದೆ. ಈಗ ಇಲ್ಲಿಯವರೆಗೆ ಒಟ್ಟು ಆರು ಜನ ಕೋವಿಡ ರೋಗ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಇನ್ನು 17 ಜನರು ಜಿಲ್ಲೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.