ಬಾಗಲಕೋಟೆ: ನಾಳೆ ಬಿಜೆಪಿ ಜಿಲ್ಲಾ ಕಾರ್ಯಾಲಯ ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು ಸಮಾರಂಭ ಜರುಗಲಿದೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆನ್ಲೈನ್ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಕುಮಾರ ಪಾಟೀಲ ತಿಳಿಸಿದ್ದಾರೆ.
ಅವರು ನವನಗರದ ಪ್ರೆಸ್ ಕ್ಲಬ್ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ಸುಮಾರು 3.50 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಜಿಲ್ಲಾ ಕಚೇರಿ ಕಟ್ಟಡವು ಮೂರು ಅಂತಸ್ತನ್ನು ಒಳಗೊಂಡಿದ್ದು, ಎಲ್ಲಾ ಸೌಲಭ್ಯಗಳನ್ನು ಹೊಂದಿರಲಿದೆ. ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ನಾಳೆ ನಡೆಯುವ ಪೂಜೆಯಲ್ಲಿ ಭಾಗವಹಿಸಿ ನಂತರ ನಡೆಯುವ ಸಮಾರಂಭದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸಾಮಾಜಿಕ ಅಂತರ ಹಾಗೂ ಸ್ಯಾನಿಟೈಸರ್ ಬಳಸಿ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಹೆಚ್ಚಾಗಿ ಕಾರ್ಯಕರ್ತರು ಆನ್ಲೈನ್ ಮೂಲಕ ಮನೆಯಿಂದಲೇ ವೀಕ್ಷಣೆ ಮಾಡಬಹುದು ಎಂದರು.
ಇದೇ ಸಮಯದಲ್ಲಿ ಬಿಜೆಪಿ ಮುಖಂಡರಾದ ಜಯಂತ ಕುರಂದವಾಡೆ ಮಾತನಾಡಿ, ಡಿ ಜೆ ಹಳ್ಳಿ ಶಾಸಕ ಅಖಂಡ ಶ್ರೀನಿವಾಸ ಅವರ ಮನೆಯ ಮೇಲೆ ದಾಳಿ, ಪೊಲೀಸ್ ಹಾಗೂ ಮಾಧ್ಯಮದವರ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ. ತಪ್ಪಿಸ್ಥರ ಆಸ್ತಿಯನ್ನು ಮುಟ್ಟುಗೋಲು ಹಾಕಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಮುಖ್ಯಮಂತ್ರಿಗೆ ಒತ್ತಾಯಿಸಿದರು.
ಬಿಜೆಪಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಬಸವರಾಜ ಸೇರಿದಂತೆ ಇತರರು ಉಪಸ್ಥಿತರಿದ್ದರು.