ಹೈದರಾಬಾದ್: ವಿಶ್ವಕಪ್ ಟೂರ್ನಿ ಮುಕ್ತಾಯಗೊಳ್ಳುತ್ತಿದ್ದಂತೆ ಟೀಂ ಇಂಡಿಯಾ ಕ್ರಿಕೆಟ್ (Indian Cricket Team) ತಂಡ ನ್ಯೂಜಿಲ್ಯಾಂಡ್ ವಿರುದ್ಧದ ಕ್ರಿಕೆಟ್ ಸರಣಿಯಲ್ಲಿ ಭಾಗಿಯಾಗಲಿದೆ. ನವೆಂಬರ್ 17ರಿಂದ ಆರಂಭಗೊಳ್ಳಲಿರುವ ಸರಣಿಯಲ್ಲಿ ಮೊದಲಿಗೆ ಮೂರು ಟಿ20 ಪಂದ್ಯಗಳು ನಡೆಯಲಿದ್ದು, ತದನಂತರ ಟೆಸ್ಟ್ ಸರಣಿ (India vs New Zealand Test series) ಆರಂಭಗೊಳ್ಳಲಿದೆ.
ಟಿ20 ಪಂದ್ಯಗಳಿಗಾಗಿ ಈಗಾಗಲೇ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ (Team India) ಪ್ರಕಟಗೊಂಡಿದ್ದು ವೆಂಕಟೇಶ್ ಅಯ್ಯರ್, ಆವೇಶ್ ಖಾನ್ ಸೇರಿದಂತೆ ಕೆಲ ಹೊಸ ಪ್ರತಿಭೆಗಳಿಗೆ ಮಣೆ ಹಾಕಲಾಗಿದೆ. ಆದರೆ ಟೆಸ್ಟ್ ಪಂದ್ಯಗಳಿಗಾಗಿ ಟೀಂ ಇಂಡಿಯಾ ಘೋಷಣೆಯಾಗಿಲ್ಲ. ಈಗಾಗಲೇ ಕೆಲವೊಂದು ಪಂದ್ಯಗಳಿಂದ ಕೊಹ್ಲಿಗೆ ವಿಶ್ರಾಂತಿ ನೀಡಿರುವ ಕಾರಣ, ಮೊದಲ ಟೆಸ್ಟ್ ಪಂದ್ಯದ ನಾಯಕತ್ವ ಜವಾಬ್ದಾರಿ ಅಜಿಂಕ್ಯಾ ರಹಾನೆ (Ajinkya Rahane) ಹೆಗಲಿಗೆ ಬೀಳಲಿದೆ.
ಇದನ್ನೂ ಓದಿ: ನಡುರಸ್ತೆಯಲ್ಲೇ ಕಾರಿಗೆ ಬೆಂಕಿ ಹಚ್ಚಿದ ಮಾಲೀಕ: ಕಾರಣ ಮಾತ್ರ ವಿಚಿತ್ರ!
ವಿರಾಟ್ ಕೊಹ್ಲಿ ಗೈರು ಹಾಜರಿ ವೇಳೆ ರಹಾನೆ ಟೀಂ ಇಂಡಿಯಾ ಟೆಸ್ಟ್ ತಂಡ ಮುನ್ನಡೆಸಿದ್ದಾರೆ. ಇದೇ ವರ್ಷ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವಿರಾಟ್ ಅನುಪಸ್ಥಿತಿಯಲ್ಲಿ ರಹಾನೆ ನಾಯಕತ್ವ ಜವಾಬ್ದಾರಿ ವಹಿಸಿಕೊಂಡಿದ್ದರು. ಈ ವೇಳೆ ಟೀಂ ಇಂಡಿಯಾ ಐತಿಹಾಸಿಕ ಜಯ ಸಾಧಿಸಿತ್ತು.
ಭಾರತದಲ್ಲಿ ಕ್ರಿಕೆಟ್ ಸರಣಿ ಆರಂಭಗೊಳ್ಳಲಿದ್ದು ಪ್ರವಾಸಿ ನ್ಯೂಜಿಲ್ಯಾಂಡ್ ತಂಡ ಮೂರು ಟಿ20 ಪಂದ್ಯಗಳ ಸರಣಿಯಲ್ಲಿ ಭಾಗಿಯಾಗಲಿದೆ. ನವೆಂಬರ್ 17,19 ಹಾಗೂ 21ರಂದು ಈ ಪಂದ್ಯಗಳು ಜೈಪುರ್, ರಾಂಚಿ ಹಾಗೂ ಕೋಲ್ಕತ್ತಾದಲ್ಲಿ ನಡೆಯಲಿವೆ. ಇದಾದ ಬಳಿಕ ನವೆಂಬರ್ 25ರಿಂದ ಎರಡು ಟೆಸ್ಟ್ ಪಂದ್ಯಗಳ ಸರಣಿ ಆರಂಭಗೊಳ್ಳಲಿದ್ದು, ಮೊದಲ ಟೆಸ್ಟ್ ಪಂದ್ಯ ಕಾನ್ಪುರ್ ಹಾಗೂ ಎರಡನೇ ಪಂದ್ಯ ಮುಂಬೈನ ವಾಂಖೆಡೆ ಮೈದಾನದಲ್ಲಿ ಆಯೋಜನೆಗೊಂಡಿದೆ.