ಅಬುಧಾಬಿ: ಅಬುಧಾಬಿ ಕ್ರಿಕೆಟ್ ಸ್ಟೇಡಿಯಂನ ಭಾರತೀಯ ಮುಖ್ಯ ಕ್ಯುರೇಟರ್ ಮೋಹನ್ ಸಿಂಗ್ ಅವರು ತಮ್ಮ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಭಾನುವಾರ ನಡೆದ ಅಫ್ಘಾನಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧದ ಪಂದ್ಯದ ಆರಂಭಕ್ಕೂ ಮುನ್ನ ಈ ಘಟನೆ ಬೆಳಕಿಗೆ ಬಂದಿದೆ. ಉತ್ತರಾಖಂಡದ ಮೂಲದ 45 ವರ್ಷದ ಮೋಹನ್ಸಿಂಗ್ ಅವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ನ್ಯೂಜಿಲೆಂಡ್- ಅಫ್ಘಾನಿಸ್ತಾನ ಪಂದ್ಯಕ್ಕೆ ಪಿಚ್ ಸಿದ್ಧಪಡಿಸಿದ್ದರು. ಬಳಿಕ ಕೋಣೆ ಸೇರಿದ್ದ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು ಎಂದು ಯುಎಇ ಕ್ರಿಕೆಟ್ ಮೂಲಗಳು ತಿಳಿಸಿವೆ.
ಮೋಹನ್ಸಿಂಗ್ ಸಾವಿಗೆ ಅಬುಧಾಬಿ ಕ್ರಿಕೆಟ್ ಮಂಡಳಿ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಸಂತಾಪ ಸೂಚಿಸಿದೆ. ಆದರೆ, ಅವರ ಸಾವಿಗೆ ಕಾರಣ ಏನೆಂಬುದನ್ನು ತಿಳಿಸಿಲ್ಲ. ಮೋಹನ್ ಸಿಂಗ್ ಅವರು ಪತ್ನಿ ಮತ್ತು ಮಗಳನ್ನು ಅಗಲಿದ್ದಾರೆ.
ಅಬುಧಾಬಿ ಕ್ರಿಕೆಟ್ ಮುಖ್ಯ ಕ್ಯುರೇಟರ್ ಆಗಿದ್ದ ಮೋಹನ್ ಸಿಂಗ್ ಅವರು ನಿಧನರಾಗಿದ್ದಾರೆ ಎಂದು ಘೋಷಿಸಲು ದು:ಖವಾಗಿದೆ. ಮೋಹನ್ ಅವರು 15 ವರ್ಷಗಳಿಂದ ಅಬುಧಾಬಿ ಕ್ರಿಕೆಟ್ ಜತೆ ಇದ್ದಾರೆ. ಗುಣಮಟ್ಟದ ಪಿಚ್ ತಯಾರಿಸಿ ಪಂದ್ಯಗಳ ಯಶಸ್ಸಿಗೆ ಕಾರಣರಾಗಿದ್ದಾರೆ ಎಂದು ಅಬುಧಾಬಿ ಕ್ರಿಕೆಟ್ ಸಂಸ್ಥೆ ತಿಳಿಸಿದೆ.