ನವದೆಹಲಿ: ಹಾಲಿ ಏಷ್ಯನ್ ಯೂತ್ ಚಾಂಪಿಯನ್ ರವೀನಾ ಅವರು ಯೂತ್ ವರ್ಲ್ಡ್ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು. ಈ ಮೂಲಕ ಪುರುಷರ ಮತ್ತು ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ 2022 ರಲ್ಲಿ ಭಾರತಕ್ಕೆ ಒಟ್ಟು 11 ಪದಕಗಳು ಲಭಿಸಿದಂತಾಗಿದೆ.
ಸ್ಪೇನ್ನ ಲಾ ನುಸಿಯಾದಲ್ಲಿ ನಡೆದ ಕೊನೆಯ ದಿನದ (63 ಕೆ.ಜಿ) ವಿಭಾಗದ ಫೈನಲ್‌ನಲ್ಲಿ ರವೀನಾ ಅವರು ನೆದರ್ಲೆಂಡ್ಸ್‌ನ ಮೇಗನ್ ಡಿಕ್ಲರ್ ವಿರುದ್ಧ ಸೆಣಸಾಡಿ 4-3 ಅಂತರದಿಂದ ವಿಜಯಗಳಿಸಿದರು.
ಇನ್ನೊಂದು ಫೈನಲ್‌ನಲ್ಲಿ ಕೀರ್ತಿ (81+ಕೆಜಿ) ಅವರು ಯುರೋಪಿಯನ್ ಯೂತ್ ಚಾಂಪಿಯನ್ ಐರ್ಲೆಂಡ್‌ನ ಕ್ಲಿಯೋನಾ ಎಲಿಜಬೆತ್ ಡಿ ಆರ್ಕಿ ವಿರುದ್ಧ ಹೋರಾಡಿ 0-5 ಅಂತರದಲ್ಲಿ ಸೋಲನುಭವಿಸುವ ಮೂಲಕ ಬೆಳ್ಳಿ ಗೆದ್ದರು.
ಭಾರತದ 25 ಸದಸ್ಯರ ತಂಡವು ನಾಲ್ಕು ಚಿನ್ನ, ಮೂರು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕ ಒಳಗೊಂಡಂತೆ ಒಟ್ಟು 11 ಪದಕಗಳನ್ನು ಗಳಿಸುವ ಮೂಲಕ ಪ್ರಬಲ ಶಕ್ತಿ ಪ್ರದರ್ಶಿಸಿದೆ. 17 ಭಾರತೀಯರು ಈ ಪಂದ್ಯಾವಳಿಯ ಕ್ವಾರ್ಟರ್-ಫೈನಲ್‌ಗೆ ಅರ್ಹತೆ ಪಡೆದಿದ್ದರು.
ಇದನ್ನೂ ಓದಿ: ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್: ಭಾರತಕ್ಕೆ ಮೂರು ಚಿನ್ನದ ಪದಕ ತಂದ ಮಹಿಳಾ ಮಣಿಗಳು
ಪದಕ ಗೆದ್ದ ಕ್ರೀಡಾಪಟುಗಳ ಮಾಹಿತಿ: ರವೀನಾ (63 ಕೆಜಿ), ದೇವಿಕಾ ಘೋರ್ಪಡೆ (52 ಕೆಜಿ) ಚಿನ್ನ ಗೆದ್ದರೆ, ಕೀರ್ತಿ (81 + ಕೆಜಿ), ಭಾವನಾ ಶರ್ಮಾ (48 ಕೆಜಿ) ಬೆಳ್ಳಿ ಪದಕಕ್ಕೆ ಮುತ್ತಿಟ್ಟರು. ಮುಸ್ಕಾನ್ (75 ಕೆಜಿ), ಲಶು ಯಾದವ್ (70 ಕೆಜಿ), ಕುಂಜರಾಣಿ ದೇವಿ ತೊಂಗಮ್ (60 ಕೆಜಿ) ಮತ್ತು ತಮನ್ನಾ (50 ಕೆಜಿ) ಕಂಚಿನ ಪದಕವನ್ನು ತನ್ನದಾಗಿಸಿಕೊಂಡರು.
ಇನ್ನು ಪುರುಷರ ವಿಭಾಗದಲ್ಲಿ ಯೂತ್ ಏಷ್ಯನ್ ಚಾಂಪಿಯನ್ ವಂಶಜ್ (63.5 ಕೆಜಿ) ಮತ್ತು ವಿಶ್ವನಾಥ್ ಸುರೇಶ್ (48 ಕೆಜಿ) ಚಿನ್ನ ಗೆದ್ದರೆ, ಆಶಿಶ್ (54 ಕೆಜಿ) ಬೆಳ್ಳಿ ಗೆದ್ದರು.
ಇದನ್ನೂ ಓದಿ: ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್: ಚಿನ್ನಕ್ಕೆ ಮುತ್ತಿಕ್ಕಿದ ಪರ್ವೀನ್, ಬೆಳ್ಳಿಗೆ ಕೊರಳೊಡ್ಡಿದ ಮೀನಾಕ್ಷಿ
ಲಾ ನುಸಿಯಾದಲ್ಲಿ ನಡೆದ ಈ ವರ್ಷದ ಚಾಂಪಿಯನ್ಶಿಪ್ನಲ್ಲಿ 73 ದೇಶಗಳ ಸುಮಾರು 600 ಬಾಕ್ಸರ್‌ಗಳು ಭಾಗವಹಿಸಿದ್ದರು.