ಬೆಲೆಮ್ (ಬ್ರೆಜಿಲ್): ಬ್ರೆಜಿಲ್ನ ಖ್ಯಾತ ಫುಟ್‌ಬಾಲ್ ಆಟಗಾರ ನೇಮರ್ ಡ ಸಿಲ್ವಾ ಮತ್ತು ಅವರ ಗೆಳತಿ ಮಾಡೆಲ್ ಬ್ರೂನಾ ಬಿಯಾನ್‌ಕಾರ್ಡಿ ಹೆಣ್ಣು ಮಗುವನ್ನು ಸ್ವಾಗತಿಸಿದ್ದಾರೆ. ತಾವು ಹೆಣ್ಣು ಮಗುವನ್ನು ಬರಮಾಡಿಕೊಂಡಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಖಚಿತಪಡಿಸಿದ್ದಾರೆ.
ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮಗುವಿನ ಫೋಟೋ ಪೋಸ್ಟ್ ಮಾಡುವ ಮೂಲಕ ಬ್ರೂನಾ ಮತ್ತು ನೇಮರ್ ಖುಷಿ ವಿಚಾರ ಹಂಚಿಕೊಂಡಿದ್ದಾರೆ. "ನಮ್ಮ ಈ ಮಗು ನಮ್ಮ ಜೀವನವನ್ನು ಪೂರ್ಣಗೊಳಿಸಲು ಬಂದಿದೆ. ಸ್ವಾಗತ, ಮಗಳೇ! ನಮಗೆ ಹರಸಿ ಹಾರೈಸಿದ ನಿಮಗೆಲ್ಲರಿಗೂ ಧನ್ಯವಾದಗಳು'' ಎಂದು ನೇಮರ್ ಫೋಟೋಗಳಿಗೆ ಶೀರ್ಷಿಕೆ ಬರೆದುಕೊಂಡಿದ್ದಾರೆ. ಮಗುವಿನ ಆಗಮನವದ ಖುಷಿಯಲ್ಲಿ ತೇಲಾಡುತ್ತಿರುವ ಬ್ರೂನಾ, ಇದು ನಮ್ಮ ಪ್ರೀತಿಯ ಸಂಕೇತ ಎಂದು ಹೇಳಿಕೊಂಡಿದ್ದಾರೆ.
ದಂಪತಿಗೆ ಮಗು ಆಗಿರುವ ವಿಚಾರ ಗೊತ್ತಾಗುತ್ತಿದ್ದಂತೆ ಅಭಿಮಾನಿಗಳು ಕೂಡ ಜಾಲತಾಣದಲ್ಲಿ ಶುಭಾಶಯ ಕೋರುತ್ತಿದ್ದಾರೆ. ಬ್ರೂನಾ ಅವರ ಪೋಸ್ಟ್ ವಿಭಾಗವು ಅಭಿನಂದನಾ ಶುಭಾಶಯಗಳಿಂದ ಭರ್ತಿಯಾಗಿದೆ. ''ದೇವರು ನಿಮಗೆ ಆಶೀರ್ವದಿಸಲಿ" ಎಂದು ನೆಟ್ಟಿಗರೊಬ್ಬರು ದಂಪತಿಯ ಮುದ್ದಾದ ಹಳೆಯ ಫೋಟೋ ಜೊತೆಗೆ ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ದಂಪತಿಯ ಖಾಸಗಿ ವಿಚಾರ ಪ್ರಸ್ತಾಪಿಸಿ ವಿಶ್ ಮಾಡಿದ್ದನ್ನು ನಾವು ಕಾಣಬಹುದು.
ಕೆಲವು ವೈಯಕ್ತಿಕ ಕಾರಣಗಳಿಂದ ತಮ್ಮ ಸಂಬಂಧಕ್ಕೆ ವಿದಾಯ ಹೇಳಿದ್ದ ಈ ಸ್ಟಾರ್ ದಂಪತಿ, ಇತ್ತೀಚೆಗಷ್ಟೇ ಮತ್ತೆ ಒಂದಾಗಿದ್ದರು. ಕಳೆದ ಕೆಲವು ತಿಂಗಳ ಹಿಂದೆ ತಾವು ತಂದೆ-ತಾಯಿ ಆಗುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರು. ಮತ್ತೆ ಒಂದಾಗಿದ್ದಕ್ಕೆ ನೆಟಿಜನ್ಸ್ ನೇಮರ್ ಮತ್ತು ಅವರ ಗೆಳತಿ ಬ್ರೂನಾಗೆ ಶುಭಾಶಯ ಕೋರಿದ್ದರು.
ಸದ್ಯ ಮಗಳನ್ನು ಚುಂಬಿಸುತ್ತಿರುವ ಮತ್ತು ಸ್ನಾನ ಮಾಡಿಸುತ್ತಿರುವ ತಮ್ಮ ಮಗಳ ಕೆಲವು ಮುದ್ದಾದ ಫೋಟೋಗಳನ್ನು ದಂಪತಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಮಗುವಿನ ಕೈ ಹಿಡಿದ ಫೋಟೋಗಳಿಂದ ಪ್ರೀತಿಯ ಅಪ್ಪುಗೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಜಾಗ ಪಡೆದಿವೆ.
ಕೆರೊಲಿನಾ ಡಾಂಟಾಸ್ ಎಂಬುವರ ಹಿಂದಿನ ಸಂಬಂಧದಿಂದ ನೇಮರ್ ಈಗಾಗಲೇ 12 ವರ್ಷದ ಡೇವಿ ಲುಕಾ ಎಂಬ ಮಗನನ್ನು ಹೊಂದಿದ್ದಾರೆ. 2021 ರಿಂದ ಬ್ರೂನಾ ಅವರ ಜೊತೆ ಡೇಟಿಂಗ್ ಮಾಡುತ್ತಿದ್ದ ನೇಮರ್, ಕಳೆದ ವರ್ಷ ಜನವರಿಯಲ್ಲಿ ಕೆಲವು ವೈಯಕ್ತಿಕ ಕಾರಣದಿಂದ ತಮ್ಮ ಸಂಬಂಧಕ್ಕೆ ವಿದಾಯ ಹೇಳಿದ್ದರು. ಹಳೆಯದನ್ನು ಮರೆತು ಮತ್ತೆ ಒಂದಾಗಿದ್ದ ನೇಮರ್ ಸದ್ಯ ಎರಡನೇ ಮಗುವಿಗೆ ತಂದೆಯಾಗಿದ್ದಾರೆ. ನೇಮರ್ ವಿಶ್ವದ ಅತ್ಯಂತ ದುಬಾರಿ ಫುಟ್‌ಬಾಲ್ ಆಟಗಾರರಲ್ಲಿ ಒಬ್ಬರಾದರೆ, ಅವರ ಗೆಳತಿ ಬ್ರೂನಾ ಬಿಯಾನ್ಕಾರ್ಡಿ ಮಾಡೆಲ್ ಮತ್ತು ಸೋಷಿಯಲ್ ಮೀಡಿಯಾ ಇನ್ಫ್ಲುಯನ್ಸರ್ ಕೂಡ ಹೌದು.
ಇದನ್ನೂ ಓದಿ: ನಟಿ ಜಯಪ್ರದಾ ESI ಪ್ರಕರಣ: ಮದ್ರಾಸ್ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ ನಟಿ.. ಇಎಸ್ಐಗೆ ಉತ್ತರಿಸುವಂತೆ ಆದೇಶ