ಬೆಂಗಳೂರು: ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರೋ ಕಬಡ್ಡಿ ಲೀಗ್‌ನಲ್ಲಿ ಭಾನುವಾರದ ಎರಡನೇ ಪಂದ್ಯದಲ್ಲಿ ಬಲಿಷ್ಠ ಯುಪಿ ಯೋಧಾಸ್ ತಂಡ ತಮಿಳು ತಲೈವಾಸ್ ವಿರುದ್ಧ 41-24 ಅಂತರದಲ್ಲಿ ಜಯ ಗಳಿಸಿದೆ.
ಆರಂಭದಿಂದಲೂ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದ ಯೋಧಾಸ್ ತಂಡ ಪ್ರಥಮಾರ್ಧದಲ್ಲಿ 23-11 ಅಂತರದಲ್ಲಿ ಮುನ್ನಡೆ ಕಂಡಿತ್ತು. ಅಶು ಸಿಂಗ್ (6) ಹಾಗೂ ಸುಮಿತ್ (7) ಟ್ಯಾಕಲ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದ್ದು, ಯೋಧಾಸ್ ಜಯದ ಹೈಲೈಟ್ಸ್ ಆಗಿತ್ತು. ಎಂದಿನಂತೆ ಪರ್ದೀಪ್ ನರ್ವಾಲ್ (6) ಹಾಗೂ ಸುರೆಂದರ್ ಗಿಲ್ (4) ತಮ್ಮ ನೈಜ ಆಟ ಪ್ರದರ್ಶಿಸಿ ತಂಡದ ಜಯಕ್ಕೆ ನೆರವಾದರು. ತಮಿಳು ತಲೈವಾಸ್ ಪರ ಹಿಮಾಂಶು ಟ್ಯಾಕಲ್‌ನಲ್ಲಿ 7 ಅಂಕ ಗಳಿಸಿದರು. ಆದರೆ, ರೈಡಿಂಗ್‌ನಲ್ಲಿ ಸಂಪೂರ್ಣ ವಿಫಲ ಕಂಡಿದ್ದು ತಲೈವಾಸ್ ಸೋಲಿಗೆ ಪ್ರಮುಖ ಕಾರಣವಾಯಿತು.
ಪರ್ದೀಪ್ ನರ್ವಾಲ್ ದಾಖಲೆ: ಸ್ಟಾರ್ ರೈಡರ್ ಪರ್ದೀಪ್ ನರ್ವಾಲ್ ಪ್ರೋ ಕಬಡ್ಡಿ ಇತಿಹಾದಲ್ಲೇ 1,400 ರೈಡಿಂಗ್ ಅಂಕ ಗಳಿಸುವ ಮೂಲಕ ಹೊಸ ಇತಿಹಾಸ ಬರೆದರು. ತಮಿಳು ತಲೈವಾಸ್ ವಿರುದ್ಧದ ಪಂದ್ಯದಲ್ಲಿ ಎರಡನೇ ಅಂಕ ಗಳಿಸುವ ಮೂಲಕ ಪರ್ದೀಪ್ ಈ ಹೊಸ ಮೈಲಿಗಲ್ಲು ದಾಟಿದರು. ಏಕಮುಖವಾಗಿ ನಡೆದ ಪಂದ್ಯದಲ್ಲಿ ಯುಪಿ ಯೋಧಾಸ್ ಪ್ರಥಮಾರ್ಧದಲ್ಲಿ 23-11 ಅಂತರದಲ್ಲಿ ಮೇಲುಗೈ ಸಾಧಿಸಿತು.
ಯೋಧಾಸ್ ತಂಡ ಟ್ಯಾಕಲ್‌ನಲ್ಲಿ 9 ಅಂಕ ಗಳಿಸಿ ಎರಡು ಬಾರಿ ತಮಿಳು ತಲೈವಾಸ್ ಪಡೆಯನ್ನು ಆಲೌಟ್ ಮಾಡಿತು. ಆರಂಭದಲ್ಲೇ ಪರ್ದೀಪ್ ನರ್ವಾಲ್ರನ್ನು ಟ್ಯಾಕಲ್‌ನಲ್ಲಿ ಸೆರೆ ಹಿಡಿಯುವ ಮೂಲಕ ತಮಿಳು ತಲೈವಾಸ್ ಉತ್ತಮ ಪ್ರದರ್ಶನ ತೋರುವ ಲಕ್ಷಣ ತೋರಿತ್ತು. ಆದರೆ, ಪಂದ್ಯ ಸಾಗುತ್ತಿದ್ದಂತೆ ತನ್ನ ನೈಜ ಸಾಮರ್ಥ್ಯ ತೋರುವಲ್ಲಿ ವಿಫಲವಾಯಿತು.
ಇದನ್ನೂ ಓದಿ: ಪ್ರೊ ಕಬಡ್ಡಿ ಲೀಗ್ : ಪಾಟ್ನಾ ಪೈರೇಟ್ಸ್, ಬೆಂಗಳೂರು ಬುಲ್ಸ್ ಪಂದ್ಯ ಸಮಬಲದಲ್ಲಿ ಮುಕ್ತಾಯ..