ಪ್ಯಾರಿಸ್: ಈಗಾಗಲೇ ವ್ಯಾಕ್ಸಿನ್ ಪಡೆಯದ ಹಿನ್ನೆಲೆಯಲ್ಲಿ ನಾಟಕೀಯ ಬೆಳವಣಿಗೆಯ ನಂತರ ಆಸ್ಟ್ರೇಲಿಯಾ ಓಪನ್ನಿಂದ ಹೊರಬಿದ್ದಿರುವ ವಿಶ್ವದ ನಂಬರ್ 1 ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್ಗೆ ಫ್ರೆಂಚ್ ಓಪನ್‌ನಲ್ಲಿ ಆಡುವ ಅವಕಾಶ ಕೂಡ ಕೈತಪ್ಪುವ ಸಾಧ್ಯತೆ ದಟ್ಟವಾಗಿದೆ.
ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ಫ್ರಾನ್ಸ್ ಸರ್ಕಾರ ಹೊಸ ಲಸಿಕಾ ಕಾನೂನು ಜಾರಿಗೆ ತಂದಿದೆ. ಈ ಕಾನೂನಿನಲ್ಲಿ ಯಾರಿಗೂ ಯಾವುದೇ ವಿನಾಯಿತಿ ಇರುವುದಿಲ್ಲ ಎಂದು ಅಲ್ಲಿನ ಕ್ರೀಡಾ ಸಚಿವಾಲಯ ಸೋಮವಾರ ಹೇಳಿಕೆ ಬಿಡುಗಡೆ ಮಾಡಿದೆ. ಇದರಿಂದಾಗಿ ಜೊಕೊವಿಕ್ ಅವರಿಗೆ ವಿಶ್ವದಾಖಲೆಯ 21ನೇ ಗ್ರ್ಯಾಂಡ್ ಸ್ಲಾಮ್ ಕನಸು ಕಮರುವಂತಾಗಿದೆ.
ಫ್ರಾನ್ಸ್ನಲ್ಲಿ ಪಾರ್ಲಿಮೆಂಟ್ ಭಾನುವಾರ ವ್ಯಾಕ್ಸಿನೇಷನ್ ಪಾಸ್ ಕಾನೂನು ಜಾರಿಗೆ ತಂದಿದ್ದು, ಇದರಲ್ಲಿ ಸಾರ್ವಜನಿಕ ಸ್ಥಳಗಳಾದ ರೆಸ್ಟೋರೆಂಟ್, ಕೆಫೆ, ಚಿತ್ರಮಂದಿರಗಳಿಗೆ ಪ್ರವೇಶ ಮಾಡಬೇಕಾದರೆ ಲಸಿಕಾ ಪ್ರಮಾಣ ಪತ್ರ ಮತ್ತು ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಅನುಸರಿಸಬೇಕೆಂದು ಘೋಷಿಸಲಾಗಿತ್ತು.
ಮೇ ತಿಂಗಳಲ್ಲಿ ನಡೆಯಲಿರುವ ಫ್ರೆಂಚ್ ಓಪನ್ಗೆ ಆಗಮಿಸುವ ಆಟಗಾರರು ಮತ್ತು ಪ್ರೇಕ್ಷಕರಿಗೂ ಇದು ಅನ್ವಯವಾಗುತ್ತದೆ. ಇದರಲ್ಲಿ ಯಾರಿಗೂ ಯಾವುದೇ ರೀತಿಯ ವಿನಾಯಿತಿ ಇರುವುದಿಲ್ಲ ಎಂದು ಸಚಿವಾಲಯ ಸ್ಪಷ್ಟವಾಗಿ ತಿಳಿಸಿದೆ.
20 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ವಿಜೇತ ಕೋವಿಡ್ ಆರಂಭವಾದ ದಿನದಿಂದಲೂ ಲಸಿಕೆಯ ವಿರುದ್ಧವಾಗಿಯೇ ಮಾತನಾಡುತ್ತಾ ಬಂದಿದ್ದರು. ಆದರೆ ಭಾನುವಾರ ಲಸಿಕೆಯ ವಿರುದ್ಧ ಇರುವ ನೊವಾಕ್ ವಿರುದ್ಧ ಅಲ್ಲಿನ ಸರ್ಕಾರ ವಿಧಿಸಿದ್ದ ವೀಸಾ ರದ್ದಿನ ಕ್ರಮವನ್ನು ಆಸ್ಟ್ರೇಲಿಯಾ ಕೋರ್ಟ್ ಮಾನ್ಯತೆ ಮಾಡಿ, ಸರ್ಬಿಯನ್ ಆಟಗಾರನನ್ನು ದೇಶ ಬಿಡುವಂತೆ ಆದೇಶಿಸಿತ್ತು. ಕೋರ್ಟ್ ತೀರ್ಪಿನ ನಂತರ ಅವರು ಯುಎಇ ಮೂಲಕ ಸರ್ಬಿಯಾಗೆ ಪ್ರಯಾಣ ಬೆಳೆಸಿದ್ದರು.
ಇದನ್ನೂ ಓದಿ:ಕೋರ್ಟ್ನಲ್ಲಿ ಪರಾಜಯ.. ಆಸ್ಟ್ರೇಲಿಯಾ ತೊರೆದು ತವರಿನ ವಿಮಾನವೇರಿದ ಜೊಕೊವಿಕ್