ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಭರ್ಜಿ ದೊರೆ ನೀರಜ್ ಚೋಪ್ರಾ ಮುಂಬರುವ ಕಾಮನ್‌ವೆಲ್ತ್ ಗೇಮ್ಸ್ನಿಂದ ಹೊರಬಿದ್ದಿದ್ದಾರೆ. ಗಾಯದ ಸಮಸ್ಯೆಗೆ ಒಳಗಾದ ನೀರಜ್ ಬರ್ಮಿಂಗ್ಹ್ಯಾಮ್ನಲ್ಲಿ ನಡೆಯುವ ಕ್ರೀಡಾಕೂಟವನ್ನು ತಪ್ಪಿಸಿಕೊಳ್ಳಲಿದ್ದಾರೆ.
ಈ ಬಗ್ಗೆ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಮಾಹಿತಿ ನೀಡಿದ್ದು, ಹಾಲಿ ಒಲಿಂಪಿಕ್ ಚಾಂಪಿಯನ್ ಗಾಯಗೊಂಡಿದ್ದಾರೆ. ಹೀಗಾಗಿ ಅವರಿಗೆ ಒಂದು ತಿಂಗಳ ಕಾಲ ವಿಶ್ರಾಂತಿ ಬೇಕಾಗಿದೆ. ಇದರಿಂದ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸುವುದಿಲ್ಲ ಎಂದು ತಿಳಿಸಿದರು.
2 ದಿನಗಳ ಹಿಂದಷ್ಟೇ ಮುಗಿದ ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ನೀರಜ್ ಚೋಪ್ರಾ ಅವರು ಗಾಯಗೊಂಡ ಬಗ್ಗೆ ಮಾಹಿತಿ ನೀಡಿದರು. ಫೈನಲ್ಗೂ ಮುನ್ನ ಅವರು ಗಾಯಕ್ಕೀಡಾಗಿದ್ದರು ಎಂದು ರಾಜೀವ್ ಮೆಹ್ತಾ ಹೇಳಿದರು.
ಚೋಪ್ರಾ ಅವರು ಸೋಮವಾರ ಎಂಆರ್ಐ ಸ್ಕ್ಯಾನ್ಗೆ ಒಳಗಾಗಿದ್ದಾರೆ. ಅದರ ಆಧಾರದ ಮೇಲೆ ವೈದ್ಯಕೀಯ ತಂಡ ಅವರಿಗೆ ಒಂದು ತಿಂಗಳ ವಿಶ್ರಾಂತಿಗೆ ಸಲಹೆ ನೀಡಿದೆ. ಬರ್ಮಿಂಗ್ಹ್ಯಾಮ್ನಲ್ಲಿ ಕಾಮನ್ ವೆಲ್ತ್ ಗೇಮ್ಸ್-2022 ಜುಲೈ 28 ರಿಂದ ಆಗಸ್ಟ್ 8 ರವರೆಗೆ ನಡೆಯಲಿದೆ.
ಜುಲೈ 24 ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ನೀರಜ್ ಚೋಪ್ರಾ 88.13 ಮೀ ಭರ್ಜಿ ಎಸೆಯುವ ಮೂಲಕ ಎರಡನೇ ಸ್ಥಾನ ಪಡೆದು ಐತಿಹಾಸಿಕ ಬೆಳ್ಳಿ ಜಯಿಸಿದ್ದರು. 2003 ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನ ಲಾಂಗ್ ಜಂಪ್‌ನಲ್ಲಿ ಕಂಚಿನ ಪದಕ ಗೆದ್ದ ಅಂಜು ಬಾಬಿ ಜಾರ್ಜ್ ಬಳಿಕ ಪದಕ ಗೆದ್ದ ಎರಡನೇ ಭಾರತೀಯ ಮತ್ತು ರಜತ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಇದೆ.
ಇದನ್ನೂ ಓದಿ: ಭಾರತದ ಬಾಕ್ಸಿಂಗ್ ಫೆಡರೇಶನ್ ವಿರುದ್ಧ ಒಲಿಂಪಿಕ್ ಪದಕ ವಿಜೇತೆ ಲವ್ಲಿನಾ ಗಂಭೀರ ಆರೋಪ