ಹೈದರಾಬಾದ್: ಅಂತಾರಾಷ್ಟ್ರೀಯ ಬಾಕ್ಸರ್ ಸ್ವೀಟಿ ಬುರಾ ಮತ್ತು ಭಾರತ ಕಬಡ್ಡಿ ತಂಡದ ನಾಯಕ ದೀಪಕ್ ಹೂಡಾ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಹರಿಯಾಣದ ಹಿಸಾರ್ನಲ್ಲಿ ಮದುವೆ ಕಾರ್ಯಕ್ರಮ ನಡೆದಿದ್ದು, ಇದರಲ್ಲಿ ಭಾರತದ ಅನೇಕ ಕಬಡ್ಡಿ ಪ್ಲೇಯರ್ಸ್ ಭಾಗಿಯಾಗಿದ್ದರು. ಸ್ನೇಹಿತರಾಗಿದ್ದ ಬಾಕ್ಸರ್ ಸ್ವೀಟಿ ಬುರಾ - ದೀಪಕ್ ಹೂಡಾ ಇದೀಗ ಸಪ್ತಪದಿ ತುಳಿದಿದ್ದು, ಹಿಂದೂ ಸಂಪ್ರದಾಯದಂತೆ ಮದುವೆ ಕಾರ್ಯಕ್ರಮ ನಡೆದಿದೆ.
ಬಾಕ್ಸರ್ ಸ್ವೀಟಿ ಬುರಾ ಮತ್ತು ಕಬಡ್ಡಿ ಪ್ಲೇಯರ್ ದೀಪಕ್ ಹೂಡಾ 2015ರಲ್ಲಿ ಮದುವೆ ಸಮಾರಂಭದಲ್ಲಿ ಭೇಟಿಯಾಗಿದ್ದರು. ಇದಾದ ಬಳಿಕ ಇಬ್ಬರ ನಡುವೆ ಸ್ನೇಹ ಉಂಟಾಗಿತ್ತು. ಬಳಿಕ ಇಬ್ಬರ ನಡುವೆ ಆತ್ಮೀಯತೆ ಹೆಚ್ಚಾಗಿತ್ತು. ಈ ವೇಳೆ, ದೀಪಕ್ ಮದುವೆ ಪ್ರಸ್ತಾಪ ಮಾಡಿದ್ದರು. ಆದರೆ, ಬಾಕ್ಸಿಂಗ್ನಲ್ಲಿ ಸ್ವೀಟಿ ಹೆಚ್ಚು ಪ್ರಸಿದ್ಧರಾಗಿದ್ದ ಕಾರಣ ಕುಟುಂಬಸ್ಥರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
ಏಳು ವರ್ಷಗಳ ಕಾಲ ಕಾಯ್ದ ಜೋಡಿ: 2015ರಲ್ಲಿ ಮದುವೆಗೆ ಸ್ವೀಟಿ ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದರಿಂದ ಈ ಜೋಡಿ ಬರೋಬ್ಬರಿ 7 ವರ್ಷಗಳ ಕಾಲ ಕಾಯ್ದಿದ್ದು, ಇದೀಗ ಮದುವೆ ಮಾಡಿಕೊಂಡಿದ್ದಾರೆ. ಬಾಲ್ಯದ ದಿನಗಳಲ್ಲಿ ಕಬಡ್ಡಿ ಆಡುತ್ತಿದ್ದ ಸ್ವೀಟಿ, ಬಾಕ್ಸರ್ ಆಗಬೇಕೆಂಬ ಕನಸು ಕಂಡಿದ್ದರು.
15 ವರ್ಷ ವಯಸ್ಸಾದಾಗ ಮನೆಯಲ್ಲಿ ತನ್ನ ಬಯಕೆ ಹೊರಹಾಕಿದ್ದರು. ಆದರೆ, ಇದಕ್ಕೆ ಕುಟುಂಬಸ್ಥರು ಹಾಗೂ ಸಂಬಂಧಿಕರು ವಿರೋಧ ವ್ಯಕ್ತಪಡಿಸಿದ್ದರು. ಆದರೆ, ತಂದೆ ಮಹೇಂದ್ರ ಸಿಂಗ್ ಮಗಳನ್ನ ಬೆಂಬಲಿಸಿ ಬಾಕ್ಸಿಂಗ್ ಅಭ್ಯಾಸಕ್ಕೆ ಕಳುಹಿಸಿದ್ದರು. ತದನಂತರ ಅನೇಕ ಸ್ಪರ್ಧೆಗಳಲ್ಲಿ ಮಿಂಚು ಹರಿಸಿದ್ದಾರೆ. ಅನೇಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಗೆದ್ದಿದ್ದಾರೆ.
ಇದನ್ನೂ ಓದಿರಿ: 546 ದಿನಗಳ ಬಳಿಕ ಶತಕ ಸಿಡಿಸಿದ ಸ್ಟೀವ್ ಸ್ಮಿತ್.. ಮೈದಾನದಲ್ಲಿ ಸಂಭ್ರಮಾಚರಣೆ ಹೇಗಿತ್ತು ನೋಡಿ!
ಭಾರತೀಯ ಕಬಡ್ಡಿ ತಂಡದ ನಾಯಕ ದೀಪಕ್ ಹೂಡಾ ರೋಹ್ಟಕ್ ನಿವಾಸಿಯಾಗಿದ್ದು, ವೃತ್ತಿಪರ ಆಟಗಾರ. ಪ್ರೊ ಕಬಡ್ಡಿ ಲೀಗ್ನಲ್ಲಿ ಇವರು ಜೈಪುರ ಪಿಂಕ್ ಪ್ಯಾಂಥರ್ಸ್,ತೆಲಗು ಟೈಟನ್ಸ್ ಹಾಗೂ ಪುಣೇರಿ ಪಲ್ಟನ್ ತಂಡದಲ್ಲಿದ್ದರು. ದೀಪಕ್ಗೆ ಅರ್ಜುನ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.