ನವದೆಹಲಿ: ಭಾರತದ ಮಾಜಿ ಫುಟ್ಬಾಲ್ ಆಟಗಾರ ಶ್ಯಾಮಲ್ ಘೋಷ್ ಅವರು ತಮ್ಮ 71ನೇ ವಯಸ್ಸಿನಲ್ಲಿ ಅನಾರೋಗ್ಯದಿಂದ ಮಂಗಳವಾರ ಕೋಲ್ಕತ್ತಾದಲ್ಲಿ ನಿಧನರಾದರು. ಇವರು 1970 ರ ದಶಕದಲ್ಲಿ ರಾಷ್ಟ್ರೀಯ ತಂಡದ ಪ್ರಮುಖ ಆಟಗಾರರಾಗಿದ್ದರು. ಮಾಜಿ ಆಟಗಾರನ ನಿಧನಕ್ಕೆ ಕ್ರೀಡಾಲೋಕ ಕಂಬನಿ ಮಿಡಿದಿದೆ.
ಶ್ಯಾಮಲ್ ಘೋಷ್ ಆ ಕಾಲದ ಅತ್ಯಂತ ನುರಿತ ಡಿಫೆಂಡರ್ ಆಗಿದ್ದರು. 1974 ರಲ್ಲಿ ಥಾಯ್ಲೆಂಡ್ ವಿರುದ್ಧ ಮೆರ್ಡೆಕಾ ಕಪ್‌ನಲ್ಲಿ ಅಂತಾರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಆಡಿದ್ದರು. 1974 ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ತಂಡದ ಭಾಗವಾಗಿದ್ದರು.
ದೇಶೀಯ ಕ್ರೀಡೆಯಲ್ಲಿ ಘೋಷ್ ಅವರು, ಪೂರ್ವ ಬಂಗಾಳ ಮತ್ತು ಮೋಹನ್ ಬಗಾನ್ ತಂಡಗಳೆರಡನ್ನೂ ಪ್ರತಿನಿಧಿಸಿದ್ದರು. ಕೋಲ್ಕತ್ತಾ ಲೀಗ್, ಐಎಫ್ಎ ಶೀಲ್ಡ್, ಡ್ಯುರಾಂಡ್ ಕಪ್ ಮತ್ತು ರೋವರ್ಸ್ ಕಪ್ ಸೇರಿದಂತೆ ಹಲವು ಟ್ರೋಫಿಗಳನ್ನು ಗೆದ್ದಿದ್ದಾರೆ. ಈಸ್ಟ್ ಬೆಂಗಾಲ್‌ಗೆ ಹೆಚ್ಚಿನ ಯಶಸ್ಸನ್ನು ತಂದುಕೊಟ್ಟಿದ್ದರು.
1977 ರ ಋತುವಿನಲ್ಲಿ ತಂಡದ ನಾಯಕರಾಗಿದ್ದರು. ಸಂತೋಷ್ ಟ್ರೋಫಿಯಲ್ಲಿ ಬಂಗಾಳವನ್ನು 5 ಬಾರಿ ಪ್ರತಿನಿಧಿಸಿ, 1975, 1976 ಮತ್ತು 1977 ರಲ್ಲಿ ಮೂರು ಬಾರಿ ಪ್ರಶಸ್ತಿಯನ್ನು ಗೆಲ್ಲಲು ನೆರವಾಗಿದ್ದರು. 2016ರಲ್ಲಿ ಶ್ಯಾಮಲ್ ಘೋಷ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಇದನ್ನೂ ಓದಿ: ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾ ಸೇರಿದ ಬುಮ್ರಾ