ದೋಹಾ (ಕತಾರ್): ಫುಟ್ಬಾಲ್ನ ವಿಶ್ವಶ್ರೇಷ್ಟ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ನೇತೃತ್ವದ ಪೋರ್ಚುಗಲ್ ತಂಡ ಘಾನಾ ವಿರುದ್ದ 3-2 ಗೋಲುಗಳ ಅಂತರದಲ್ಲಿ ಗೆಲುವಿನ ಕೇಕೆ ಹಾಕಿತು. ಮೊದಲಾರ್ಧದಲ್ಲಿ ಎರಡೂ ತಂಡಗಳಿಗೂ ಗೋಲು ಗಳಿಸಲು ಸಾಕಷ್ಟು ಅವಕಾಶ ಸಿಕ್ಕಿತ್ತು. ಆದರೆ, ಜಿದ್ದಾಜಿದ್ದಿನ ಪೈಪೋಟಿ ಕಂಡುಬಂದು ಚೆಂಡು ಗೋಲ್‌ಪೋಸ್ಟ್ ಸೇರಲಿಲ್ಲ.
ಆದರೆ, 65ನೇ ನಿಮಿಷದ ಪೆನಾಲ್ಟಿಯೊಂದಿಗೆ ರೊನಾಲ್ಡೊ ದಾಖಲಿಸಿದ ಮೊದಲ ಗೋಲು ಪೋರ್ಚುಗಲ್‌ಗೆ 1-0 ಅಂತರದ ಮುನ್ನಡೆ ತಂದುಕೊಟ್ಟಿತು. ಮುಂದಿನ ಎಂಟು ನಿಮಿಷಗಳ ಅವಧಿಯಲ್ಲಿ ಸಿಕ್ಕ ಪೆನಾಲ್ಟಿಯನ್ನು ಘಾನಾ ಆಟಗಾರ ಆಂಡ್ರೆ ಅಯೆವ್ ಅವರು ಗೋಲ್ ಪೋಸ್ಟ್ ಸೇರಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಪಂದ್ಯವನ್ನು 1-1 ಸಮ ಮಾಡಿದರು. ತಕ್ಷಣವೇ 78ನೇ ನಿಮಿಷದಲ್ಲಿ ಜೋವೊ ಫೆಲಿಕ್ಸ್ ಮತ್ತು ಬದಲಿ ಆಟಗಾರ ರಾಫೆಲ್ ಲಿಯೊ 80ನೇ ನಿಮಿಷದಲ್ಲಿ ಮತ್ತೆರಡು ಗೋಲು ದಾಖಲಿಸುವ ಮೂಲಕ ಪೋರ್ಚುಗಲ್‌ಗೆ ಗೆಲುವು ಖಚಿತಪಡಿಸಿದರು.
ಈ ಮುನ್ನಡೆಯನ್ನು ಹಿಮ್ಮೆಟ್ಟಿಸಲು ಪ್ರಯತ್ನಿಸಿದ ಒಸ್ಮಾನ್ ಬುಕಾರಿ ಕೊನೆಯ 89ನೇ ನಿಮಿಷದಲ್ಲಿ ಗೋಲು ಹೊಡೆದು ಘಾನಾದ ಆತ್ಮವಿಶ್ವಾಸ ಹೆಚ್ಚಿಸಿದರು. ಆದರೂ, ಅಂತಿಮವಾಗಿ ಘಾನಾ ಮೊದಲ ಪಂದ್ಯದಲ್ಲಿ ಸೋಲಿನ ಕಹಿ ಅನುಭವಿಸಿತು. ಪಂದ್ಯದ ಎಲ್ಲಾ ಗೋಲುಗಳು ಆಟದ ಕೊನೆಯ ಅರ್ಧ ಗಂಟೆಯಲ್ಲಿ ದಾಖಲಾಗಿದ್ದು ವಿಶೇಷವಾಗಿತ್ತು.
ರೊನಾಲ್ಡೊ ದಾಖಲೆ: ಫುಟ್ಬಾಲ್ ದಂತಕಥೆ ಕ್ರಿಸ್ಟಿಯಾನೊ ರೊನಾಲ್ಡೊ ಈ ಪಂದ್ಯದ ಮೂಲಕ ಸತತ ಐದು ವಿಶ್ವಕಪ್‌ಗಳಲ್ಲಿ ಅತಿ ಹೆಚ್ಚು (118) ಅಂತಾರಾಷ್ಟ್ರೀಯ ಗೋಲು ಹೊಡೆದ ಮೊದಲ ಪುರುಷ ಆಟಗಾರನಾಗಿ ಇತಿಹಾಸ ಬರೆದರು.
ಬ್ರೆಜಿಲ್ vs ಸರ್ಬಿಯಾ ಪಂದ್ಯ: ಇನ್ನೊಂದು ಪಂದ್ಯದಲ್ಲಿ ಬಲಿಷ್ಠ ಬ್ರಿಜಿಲ್ ತಂಡವು ಸರ್ಬಿಯಾವನ್ನು 2-0 ಗೋಲುಗಳಿಂದ ಸೋಲಿಸಿತು. ಪಂದ್ಯ ಆರಂಭವಾದ ಮೊದಲಾರ್ಧದಲ್ಲಿ ಸರ್ಬಿಯಾದ ಬಲಿಷ್ಟ ರಕ್ಷಣಾ ಗೋಡೆಯನ್ನು ದಾಟಲು ಬ್ರೆಜಿಲ್ ಹೆಣಗಾಡಿತು. ಬ್ರೆಜಿಲ್ ಆಟಗಾರರು ಅನೇಕ ಬಾರಿ ಗೋಲು ಹೊಡೆಯಲು ಪ್ರಯತ್ನಿಸಿದರೂ ಸರ್ಬಿಯಾ ಗೋಲ್ಕೀಪರ್ ವನಜಾ ಮಿಲಿಂಕೋವಿಕ್-ಸಾವಿಕ್ ಉತ್ತಮವಾಗಿ ತಡೆದರು. ಆದರೆ ದ್ವಿತೀಯಾರ್ಧದಲ್ಲಿ ಮತ್ತಷ್ಟು ಆಕ್ರಮಣಕಾರಿ ಆಟಕ್ಕೆ ಮುಂದಾದ ಬ್ರೆಜಿಲ್‌ನ ರಿಚಾರ್ಲಿಸನ್ 9 ನಿಮಿಷಗಳಲ್ಲಿ ಎರಡು ಗೋಲು ಗಳಿಸಿ ಅಂತಿಮವಾಗಿ ವಿಜಯ ತಂದುಕೊಟ್ಟರು.
ಇದನ್ನೂ ಓದಿ: ಫಿಫಾ ವಿಶ್ವಕಪ್: ದಕ್ಷಿಣ ಕೊರಿಯಾ ಉರುಗ್ವೆ ಪಂದ್ಯ 0 - 0 ಡ್ರಾ