ಯುಜೀನ್, ಅಮೆರಿಕ: ಈ ಬಾರಿಯ ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಭಾರತದ ಸ್ಟಾರ್ ಜಾವೆಲಿನ್ ಥ್ರೋ ಅಥ್ಲೀಟ್ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ್ದು ಗೊತ್ತೇ ಇದೆ. ಆದರೆ, ಈಗ ಅವರ ಗುರಿ ಡೈಮಂಡ್ ಲೀಗ್ ಪ್ರಶಸ್ತಿ ಮೇಲಿದೆ. ಈ ಪ್ರತಿಷ್ಠಿತ ಟೂರ್ನಿ ಗೆಲ್ಲಲು ನೀರಜ್ ಚೋಪ್ರಾ ಅವರು ಕಣಕ್ಕೆ ಇಳಿಯುತ್ತಿದ್ದಾರೆ. ಡೈಮಂಡ್ ಲೀಗ್ ಫೈನಲ್ಸ್ ಇಂದು ನಡೆಯಲಿದ್ದು, ಇದರಲ್ಲಿ ಅವರು ಸ್ಪರ್ಧಿಸಲಿದ್ದಾರೆ.
Diamond League 2023 Final: 25 ವರ್ಷದ ನೀರಜ್ ಕಳೆದ ವರ್ಷ ಡೈಮಂಡ್ ಲೀಗ್ ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದರು. ಈಗ ಈ ಸೀಸನ್ನಲ್ಲಿ ಅವರು ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಸತತ ಎರಡು ಬಾರಿ ಪ್ರಶಸ್ತಿ ಗೆದ್ದ ಮೂರನೇ ಅಥ್ಲೀಟ್ ಆಗುವ ಸಂಕಲ್ಪ ತೊಟ್ಟಿದ್ದಾರೆ. ಅವರು ಈ ವರ್ಷದ ದೋಹಾ ಮತ್ತು ಲೌಸನ್ನೆ ಡೈಮಂಡ್ ಲೀಗ್ ಸ್ಪರ್ಧೆಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಇನ್ನು ಜ್ಯೂರಿಚ್‌ನಲ್ಲಿ (85.71 ಮೀಟರ್) ಎರಡನೇ ಸ್ಥಾನ ಪಡೆಯುವ ಮೂಲಕ ಫೈನಲ್‌ಗೆ ಅರ್ಹತೆ ಪಡೆದರು.
ಸ್ನಾಯು ಗಾಯದಿಂದ ಸುಮಾರು ಒಂದು ತಿಂಗಳ ಕಾಲ ಅವರು ಆಟದಿಂದ ಹೊರಗುಳಿದಿದ್ದರು. ಈಗ ಈ ಅಂತಿಮ ಕದನದಲ್ಲಿ ನೀರಜ್ ಚೋಪ್ರಾ ತನ್ನ 90 ಮೀಟರ್ ಗುರಿಯನ್ನು ತಲುಪುವ ಗುರಿಯನ್ನು ಹೊಂದಿದ್ದಾರೆ. ಪ್ರಸ್ತುತ ಈ ಸೀಸನ್ನಲ್ಲಿ ಅವರ ಅತ್ಯುತ್ತಮ ಪ್ರದರ್ಶನ 88.77 ಮೀಟರ್ ಇದೆ. ಈ ಬಾರಿ ಪ್ರಶಸ್ತಿ ಗೆಲ್ಲುವುದರೊಂದಿಗೆ 90 ಮೀಟರ್ ಗುರಿ ಮುಟ್ಟುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಈ ಫೈನಲ್‌ನಲ್ಲಿ ಜೇಕಬ್ ವಾಡ್ಲೆಚ್ (ಜೆಕ್ ಗಣರಾಜ್ಯ) ಮತ್ತು ಪೀಟರ್ಸ್ ಆಂಡರ್ಸನ್ (ಗ್ರೆನಡಾ) ಕೂಡ ಪ್ರಶಸ್ತಿಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಅವರಿಂದ ನೀರಜ್‌ಗೆ ಕಠಿಣ ಪೈಪೋಟಿ ಎದುರಾಗುವ ಸಾಧ್ಯತೆ ಇದೆ. 2021ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿಯೂ ನೀರಜ್ ಚೋಪ್ರಾ ಅವರು ಭಾರತದ ಇತಿಹಾಸವನ್ನು ಬರೆದು ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದು ಗೊತ್ತೇ ಇದೆ.
ಫೈನಲ್ ಫೈಟ್ ವಿಚಾರ ತಿಳಿದ ನೀರಜ್ ಅಭಿಮಾನಿಗಳು ಹೇಗಾದರೂ ಮಾಡಿ ನೀರಜ್ ಪ್ರಶಸ್ತಿ ಗೆಲ್ಲಲೇಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ‘ಆಲ್ ದಿ ಬೆಸ್ಟ್’ ಹೇಳುತ್ತಿದ್ದಾರೆ. ಏನೇ ಆಗಲಿ 90 ಮೀಟರ್ ಗುರಿ ತಲುಪುವ ಭರವಸೆಯಲ್ಲಿದ್ದಾರೆ ನಮ್ಮ ನೀರಜ್ ಚೋಪ್ರಾ.. ಭಾರತದ ಅಭಿಮಾನಿಗಳು ಚೋಪ್ರಾ ಅವರ ಜಾವೆಲಿನ್ ಥ್ರೋ ಕಾರ್ಯಕ್ರಮವನ್ನು ಭಾನುವಾರ ನೇರಪ್ರಸಾರ ವೀಕ್ಷಿಸಬಹುದು.
2023 ಡೈಮಂಡ್ ಲೀಗ್ ಸೀಸನ್ ಅಮೆರಿಕದ ಒರೆಗಾನ್ನಲ್ಲಿರುವ ಹೇವರ್ಡ್ ಫೀಲ್ಡ್ನಲ್ಲಿ ನಡೆಯುವ ಫೈನಲ್ಗಳೊಂದಿಗೆ ಮುಕ್ತಾಯಗೊಳ್ಳುತ್ತದೆ. ಡೈಮಂಡ್ ಲೀಗ್ 2023 ರ 13 ಹಂತಗಳ ನಂತರ ವಿವಿಧ ಅಥ್ಲೆಟಿಕ್ಸ್ ವಿಭಾಗಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕ್ರೀಡಾಪಟುಗಳು ಋತುವಿನ ಅಂತ್ಯದ ಫೈನಲ್‌ಗೆ ತಲುಪಿದ್ದಾರೆ.